ADVERTISEMENT

ಒಲಿಂಪಿಕ್ಸ್‌ | ಭಾರತ ಕ್ರಿಕೆಟ್ ತಂಡಗಳು ಚಿನ್ನ ಗೆಲ್ಲಲಿ: ರಾಹುಲ್ ದ್ರಾವಿಡ್ ಆಶಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:24 IST
Last Updated 29 ಜುಲೈ 2024, 16:24 IST
ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸೋಮವಾರ ನಡೆದ ಭಾರತ ಮತ್ತು ಅರ್ಜೆಂಟೀನಾ ಹಾಕಿ ಪಂದ್ಯವನ್ನು ಕ್ರಿಕೆಟಿಗ ರಾಹುಲ್ ದ್ರಾವಿಡ್ ವೀಕ್ಷಿಸಿದರು  –ಎಪಿ/ಪಿಟಿಐ ಚಿತ್ರ
ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸೋಮವಾರ ನಡೆದ ಭಾರತ ಮತ್ತು ಅರ್ಜೆಂಟೀನಾ ಹಾಕಿ ಪಂದ್ಯವನ್ನು ಕ್ರಿಕೆಟಿಗ ರಾಹುಲ್ ದ್ರಾವಿಡ್ ವೀಕ್ಷಿಸಿದರು  –ಎಪಿ/ಪಿಟಿಐ ಚಿತ್ರ   

ಪ್ಯಾರಿಸ್: ಲಾಸ್ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೆರ್ಪಡೆಯಾಗಲಿರುವುದು ಸಂತಸದ ವಿಷಯ. ಅದರಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳೆರಡೂ ಚಿನ್ನ ಗೆಲ್ಲಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಆಶಯ ವ್ಯಕ್ತಪಡಿಸಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಸೋಮವಾರ ‘ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌; ಹೊಸ ಯುಗದ ಉದಯ’ ವಿಷಯದ ಕುರಿತು ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. 

‘ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಅನುಭವಕ್ಕಾಗಿ ಮತ್ತು ಒಲಿಂಪಿಕ್ ಕೂಟದಲ್ಲಿ ಪದಕ ಜಯಿಸುವುದಕ್ಕಾಗಿ ಬಹಳಷ್ಟು ಯುವ ಆಟಗಾರರು ಈಗಾಗಲೇ ಕಾತುರರಾಗಿದ್ದಾರೆ. ನಾನು ಈಚೆಗೆ ತಂಡದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿಯೇ ಈ ವಿಷಯಗಳ ಬಗ್ಗೆ ಚರ್ಚಿಸುವ ಹುಡುಗರನ್ನು ನೋಡಿದ್ದೇನೆ. ಅವರೆಲ್ಲರೂ ಒಲಿಂಪಿಕ್ ಕೂಟದಲ್ಲಿ ಆಡಲು ಅವಕಾಶ ಗಿಟ್ಟಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಅದರಿಂದಾಗಿ ಬಹಳ ಪೈಪೋಟಿ ಏರ್ಪಟ್ಟಿದೆ’ ಎಂದು ದ್ರಾವಿಡ್ ಹೇಳಿದರು. 

ADVERTISEMENT

‘ಮುಂದಿನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಅದ್ಭುತವಾಗಿ ನಡೆಯಬೇಕು. ಅದರಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳು ಚಿನ್ನ ಗೆಲ್ಲಬೇಕೆಂಬುದು ನನ್ನ ಕನಸು. ಆದರೆ ಆಗ ನನಗೆ ಆಡಲು ಅವಕಾಶವಿಲ್ಲ ಎನ್ನುವ ಬೇಸರವಿದೆ. ಆದರೆ ನಾವು ಯಾವುದಾದರೊಂದು ಸ್ಥಾನದ ಮೂಲಕ ಒಲಿಂಪಿಕ್ಸ್‌ನಲ್ಲಿ ಹಾಜರಿರುತ್ತೇನೆ. ಕೊನೆಗೆ ಮಾಧ್ಯಮ ಪ್ರತಿನಿಧಿಯಾಗಿಯಾದರೂ ಬರುತ್ತೇನೆ’ ಎಂದು ದ್ರಾವಿಡ್ ನಕ್ಕರು. 

‘ಒಲಿಂಪಿಕ್ಸ್‌ನಲ್ಲಿ ಕಾರ್ಲ್ ಲೂಯಿಸ್ ಚಿನ್ನದ ಪದಕ ಜಯಿಸುವುದನ್ನು ನೋಡುತ್ತ ಬೆಳೆದವರು. ಮಹಾನ್ ಅಥ್ಲೀಟ್‌ಗಳ ಸಾಧನೆಗಳನ್ನು ವೀಕ್ಷಿಸುತ್ತ ಅವರಂತಾಗಲು ತುಡಿದವರು ನಾವು. ಒಲಿಂಪಿಕ್ ಕೂಟದ ಕ್ರೀಡಾಗ್ರಾಮದ ವಾತಾವರಣ ಮತ್ತು ಚೈತನ್ಯವು ಅಗಾಧವಾದದ್ದು. ಇದೊಂದು ಅದ್ಭುತ ಅನುಭವ ನೀಡಿದೆ’ ಎಂದರು. 

ದ್ರಾವಿಡ್ ಅವರು ಭಾರತ ಮತ್ತು ಅರ್ಜೆಂಟೀನಾ ನಡುವಣ ಹಾಕಿ ಪಂದ್ಯ ಹಾಗೂ ಟೆನಿಸ್ ಪಂದ್ಯಗಳನ್ನು ವೀಕ್ಷಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.