ನವದೆಹಲಿ: ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಫೈನಲ್‌ನಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದೆ.
ಒಮಾನ್‌ನ ಸಲಾಲದಲ್ಲಿ ನಡೆದ ನಿಗದಿತ ಸಮಯದಲ್ಲಿ ಉಭಯ ತಂಡಗಳು 4-4ರಲ್ಲಿ ಸಮಬಲ ಸಾಧಿಸಿದ್ದವು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕ್ ತಂಡವನ್ನು ಭಾರತ 2-0 ಅಂತರದಿಂದ ಸೋಲಿಸಿತು. ಇದರೊಂದಿಗೆ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾರತದ ಪರ ಮೊಹಮ್ಮದ್ ರಾಹಿಲ್ (19, 26ನೇ) ಜುಗ್‌ರಾಜ್ ಸಿಂಗ್ (7ನೇ), ಮಣಿಂದರ್ ಸಿಂಗ್ (10ನೇ) ಗೋಲು ದಾಖಲಿಸಿದ್ದಾರೆ. ಗುರ್ಜೋತ್ ಸಿಂಗ್ ಮತ್ತು ಮಣಿಂದರ್ ಸಿಂಗ್ ಶೂಟೌಟ್‌ನಲ್ಲಿ ಗೋಲು ಗಳಿಸಿದ್ದಾರೆ.
ಹಾಕಿ ಫೈವ್ಸ್ ಏಷ್ಯಾಕಪ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ಆಟಗಾರರ ಅಚಲ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಗೆಲುವಿನೊಂದಿಗೆ ಮುಂದಿನ ವರ್ಷ ಒಮಾನ್‌ನಲ್ಲಿ ನಡೆಯಲಿರುವ ಹಾಕಿ ಫೈವ್ಸ್ ವಿಶ್ವಕಪ್‌ಗೆ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇವೆ. ಹಾಕಿ ತಂಡದ ಆಟಗಾರರ ದೃಢತೆ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ, ನಿತೀನ್ ಗಡ್ಕರಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಇತ್ತೀಚಿಗೆ ನಡೆದ ಮಹಿಳಾ ಹಾಕಿ ಫೈವ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಗೆಲುವು ಸಾಧಿಸಿತ್ತು.
ಚೊಚ್ಚಲ ಹಾಕಿ ಫೈವ್ಸ್ ವಿಶ್ವಕಪ್ ಟೂರ್ನಿ ಮುಂದಿನ ವರ್ಷ ಜ. 24ರಿಂದ 27 ರವರೆಗೆ ಮಸ್ಕತ್‌ನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.