ಕೊಲಂಬೊ: ಎರಡು ವರ್ಷಗಳ ನಿಷೇಧ ಶಿಕ್ಷೆ ಪೂರೈಸಿರುವ ಕರ್ನಾಟಕದ ಆಥ್ಲೀಟ್ ಎಂ.ಆರ್.ಪೂವಮ್ಮ ಅವರು ಕಣಕ್ಕೆ ಮರಳಿದ್ದು, ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.
ಶುಕ್ರವಾರ ನಡೆದ 400 ಮೀ. ಓಟದ ಸ್ಪರ್ಧೆಯಲ್ಲಿ ಎರಡನೇ ಹೀಟ್‌ನಲ್ಲಿ ಪಾಲ್ಗೊಂಡ ಅವರು 55.84 ಸೆ.ಗಳೊಂದಿಗೆ ಕ್ರಮಿಸಿ ಎರಡನೇ ಸ್ಥಾನ ಪಡೆದರು. ಭಾರತದ ಜಿಸ್ನಾ ಮ್ಯಾಥ್ಯೂ (54.89 ಸೆ.) ಮತ್ತು ಸೋನಿಯಾ ಬೈಶ್ಯ (54.10 ಸೆ.) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಹೀಟ್ ಗೆದ್ದುಕೊಂಡರು.
ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಪೂವಮ್ಮ 2021ರಲ್ಲಿ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಎರಡು ವರ್ಷಗಳ ನಿಷೇಧ ಶಿಕ್ಷೆ 2021ರ ಫೆ.18 ರಿಂದ ಜಾರಿಗೆ ಬಂದಿತ್ತು.
‘ಪೂವಮ್ಮ ಅವರ ನಿಷೇಧ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದು, ಸ್ಪರ್ಧಿಸಲು ಅರ್ಹರಾಗಿದ್ದಾರೆ. ಅವರು ಶ್ರೀಲಂಕಾದಲ್ಲಿ ನಡೆಯುತ್ತಿರುವ ಕೂಟದಲ್ಲಿ ಭಾರತ ತಂಡದ ಭಾಗವಾಗಿರದೆ, ಪ್ರತ್ಯೇಕ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ’ ಎಂದು ರಾಷ್ಟ್ರೀಯ ತಂಡದ ಕೋಚ್‌ವೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.