ADVERTISEMENT

ಸೂಪರ್‌ಬೆಟ್‌ ಕ್ಲಾಸಿಕ್ ಚೆಸ್‌ ಟೂರ್ನಿ: ‘ಡ್ರಾ’ ಪಂದ್ಯದಲ್ಲಿ ಪ್ರಜ್ಞಾನಂದ

ಪಿಟಿಐ
Published 3 ಜುಲೈ 2024, 16:02 IST
Last Updated 3 ಜುಲೈ 2024, 16:02 IST
ಪ್ರಜ್ಞಾನಂದ ರಮೇಶಬಾಬು 
ಪ್ರಜ್ಞಾನಂದ ರಮೇಶಬಾಬು    

ಬುಖಾರೆಸ್ಟ್‌: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ, ಗ್ರ್ಯಾಂಡ್‌ ಚೆಸ್‌ ಟೂರ್ನಿಯ ಭಾಗವಾಗಿರುವ ಸೂಪರ್‌ಬಿಟ್‌ ಕ್ಲಾಸಿಕ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ತಮಗಿಂತ ಕೆಳ ಕ್ರಮಾಂಕದ ಡಿಯಾಕ್‌ ಬೊಗ್ಡಾನ್ ಡೇನಿಯಲ್ ಜೊತೆ 38 ನಡೆಗಳ ನಂತರ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು.

ಇರಾನ್‌ ಮೂಲದ ಫ್ರಾನ್ಸ್ ಆಟಗಾರ ಅಲಿರೇಜಾ ಫಿರೋಜ್ (3.5) ಅವರು ಉತ್ತಮ ಲಯದಲ್ಲಿದ್ದು, ಮಂಗಳವಾರ ನಡೆದ ಪಂದ್ಯದಲ್ಲಿ ಅಮೆರಿಕದ ವೆಸ್ಲಿ ಸೊ (2) ಅವರನ್ನು ಮಣಿಸಿ ಗಮನ ಸೆಳೆದರು. ಈ ವರ್ಷದ ಕೊನೆಗೆ ಸಿಂಗಪುರದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಆಡಲಿರುವ ಭಾರತದ ಯುವ ಆಟಗಾರ ಡಿ.ಗುಕೇಶ್ (3.5), ಹೆಚ್ಚಿನ ಸಾಹಸಕ್ಕೆ ಹೋಗದೇ ಫ್ರಾನ್ಸ್‌ನ ಮ್ಯಾಕ್ಸಿಮ್ ವೇಷಿಯರ್ ಲಗ್ರಾವ್‌ (3) ಜೊತೆ ‘ಡ್ರಾ’ ಮಾಡಿಕೊಂಡರು.

ಪ್ರಜ್ಞಾನಂದ ಅವರ ಪ್ರತಿಯೊಂದು ನಡೆಗೂ, ರೊಮೇನಿಯಾದ ಬೊಗ್ಡಾನ್‌ ಅವರು ಅದಕ್ಕೆ ಸೂಕ್ತವಾದ ನಡೆಯನ್ನಿರಿಸಿದರು. ಪಂದ್ಯ ಯಾವೊಂದು ತಿರುವು ಪಡೆಯದೇ ‘ನಡೆಗಳ ಪುನರಾವರ್ತನೆ’ಯಿಂದ ‘ಡ್ರಾ’ ಆಯಿತು.

ADVERTISEMENT

ರೌಂಡ್‌ ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಮೂರು ಸುತ್ತುಗಳು ಉಳಿದಿದ್ದು, ಅಮೆರಿಕದ ಫ್ಯಾಬಿಯಾನೊ ಕರುವಾನಾ (4) ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅವರು ‘ಫಿಡೆ’ಯನ್ನು ಪ್ರತಿನಿಧಿಸುತ್ತಿರುವ ರಷ್ಯನ್ ಆಟಗಾರ ಇಯಾನ್‌ ನಿಪೊಮ್‌ನಿಷಿ (3) ಜೊತೆ  ‘ಡ್ರಾ’ ಮಾಡಿಕೊಂಡರು. ಅಲಿರೇಜಾ, ಗುಕೇಶ್‌, ಪ್ರಜ್ಞಾನಂದ ತಲಾ 3.5 ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಲಗ್ರಾವ್‌ ಮತ್ತು ನಿಪೊಮ್‌ನಿಷಿ (ತಲಾ 3) ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಸೊ ಮತ್ತು ಡಿಯಾಕ್ ಬೊಗ್ಡಾನ್ ತಲಾ ಎರಡು ಪಾಯಿಂಟ್ಸ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.