ADVERTISEMENT

ಸೂಪರ್‌ಬೆಟ್‌ ಕ್ಲಾಸಿಕ್‌ ಚೆಸ್‌: ಎರಡನೇ ಸ್ಥಾನದಲ್ಲಿ ಗುಕೇಶ್, ಪ್ರಜ್ಞಾನಂದ

ಸೂಪರ್‌ಬೆಟ್‌ ಕ್ಲಾಸಿಕ್‌ ಚೆಸ್‌: ಐದೂ ಪಂದ್ಯಗಳು ಡ್ರಾ

ಪಿಟಿಐ
Published 5 ಜುಲೈ 2024, 12:49 IST
Last Updated 5 ಜುಲೈ 2024, 12:49 IST
<div class="paragraphs"><p>ಪ್ರಜ್ಞಾನಂದ </p></div>

ಪ್ರಜ್ಞಾನಂದ

   

-ಪಿಟಿಐ ಚಿತ್ರ

ಬುಖಾರೆಸ್ಟ್‌ (ರೊಮೇನಿಯಾ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ, ಸೂಪರ್‌ಬೆಟ್‌ ಚೆಸ್ ಟೂರ್ನಿಯು ಎಂಟನೇ ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ಜೊತೆ ‘ಡ್ರಾ’ ಮಾಡಿಕೊಂಡರೆ, ಡಿ.ಗುಕೇಶ್‌ ಅವರು ಸಹ ಡಚ್‌ ಆಟಗಾರ ಅನಿಶ್‌ ಗಿರಿ ಜೊತೆ ಪಾಯಿಂಟ್‌ ಹಂಚಿಕೊಂಡರು. ದಿನದ ಇತರ ಮೂರು ಪಂದ್ಯಗಳೂ ಡ್ರಾ ಆದವು.

ADVERTISEMENT

ಹತ್ತು ಆಟಗಾರರು ಭಾಗವಹಿಸಿರುವ ಈ ಟೂರ್ನಿಯಲ್ಲಿ ಇನ್ನೊಂದು ಸುತ್ತು ಆಡಲು ಬಾಕಿ ಉಳಿದಿದೆ. ನಾಲ್ಕನೇ ಸಲ ಯಾವೊಂದು ಪಂದ್ಯದಲ್ಲೂ ಸೋಲು– ಗೆಲುವು ನಿರ್ಧಾರವಾಗಲಿಲ್ಲ. ಹೀಗಾಗಿ ಆಟಗಾರರ ಸ್ಥಾನದಲ್ಲೂ ಬದಲಾವಣೆ ಆಗಲಿಲ್ಲ. ಈ ಟೂರ್ನಿ ‘ಗ್ರ್ಯಾಂಡ್‌ ಚೆಸ್‌ ಟೂರ್‌’ನ ಭಾಗವಾಗಿದೆ.

ಎಂಟು ಪಂದ್ಯಗಳಿಂದ ಐದು ಪಾಯಿಂಟ್ಸ್ ಹೊಂದಿರುವ ಕರುವಾನಾ ಅವರು ಮುನ್ನಡೆ ಉಳಿಸಿಕೊಂಡಿದ್ದಾರೆ. ಮೂರು ಮಂದಿ ಆಟಗಾರರು– ಪ್ರಜ್ಞಾನಂದ, ಗುಕೇಶ್ ಮತ್ತು ಅಲಿರೇಝಾ – ಅರ್ಧ ಪಾಯಿಂಟ್‌ ಹಿಂದೆಯಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಫಿಡೆ ಪ್ರತಿನಿಧಿಸುತ್ತಿರುವ ರಷ್ಯನ್ ಆಟಗಾರ ಇಯಾನ್ ನಿಪೊಮ್‌ನಿಷಿ (ಫಿಡೆ) ಮತ್ತು ಫ್ರಾನ್ಸ್‌ನ ಮ್ಯಾಕ್ಸಿಮ್ ವೇಷಿಯರ್‌ ಲಗ್ರಾವ್‌ ತಲಾ ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ.

ಅಮೆರಿಕದ ವೆಸ್ಲಿ ಸೊ, ಉಜ್ಬೇಕಿಸ್ತಾನದ ನಾಡಿರ್ಬೆಕ್‌ ಅಬ್ದುಸತ್ತಾರೊವ್ ಮತ್ತು ಹಾಲೆಂಡ್‌ನ ಅನಿಶ್‌ ಗಿರಿ (ತಲಾ 3.5) ಏಳರಿಂದ ಒಂಬತ್ತರವರೆಗಿನ ಸ್ಥಾನದಲ್ಲಿದ್ದಾರೆ. ಆತಿಥೇಯ ರೊಮೇನಿಯಾದ ಆಟಗಾರ ಡಿಯಾಕ್ ಬೊಗ್ಡಾನ್‌ ಡೇನಿಯಲ್ (3) ಕೊನೆಯ ಸ್ಥಾನದಲ್ಲಿದ್ದಾರೆ.

ಬಿಳಿ ಕಾಯಿಗಳಲ್ಲಿ ಆಡಿದ ಕರುವಾನಾ ಇಂಗ್ಲಿಷ್‌ ಓಪನಿಂಗ್‌ ಅನುಸರಿಸಿದರು. ಕೆಲವು ನಡೆಗಳ ನಂತರ ಅವರಿಗೆ ಸ್ವಲ್ಪ ಮೇಲುಗೈ ಒದಗಿತು. ಆದರೆ 14ನೇ ನಡೆಯ ನಂತರ ಕೆಲವು ಎಕ್ಸ್‌ಚೇಂಜ್‌ಗಳಾಗಿ ಇಬ್ಬರ ಬಲವೂ ಸಮಾನವಾಯಿತು 31 ನಡೆಗಳ ನಂತರ ‘ಡ್ರಾ’ ಆಯಿತು.

ಗಿರಿ ಮತ್ತು ಗುಕೇಶ್ ನಡುವಣ ಪಂದ್ಯ 30 ನಡೆಗಳ ನಂತರ ಡ್ರಾದಲ್ಲಿ ಅಂತ್ಯಗೊಂಡಿತು. ಅಲಿರೇಝಾ ಫಿರೋಜ್‌ ಮತ್ತು ನಿಪೊಮ್‌ನಿಷಿ  ನಡುವಣ; ಸೊ ಮತ್ತು ವೇಷಿಯರ್‌ ಲಗ್ರಾವ್‌ ನಡುವಣ, ಅಬ್ದುಸತ್ತಾರೋವ್ ಮತ್ತು ಡೇನಿಯಲ್ ಬೊಗ್ಡಾನ್‌ ನಡುವಣ ಪಂದ್ಯಗಳೂ ನಿರ್ಣಾಯಕ ಫಲಿತಾಂಶ ಕಾಣಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.