ADVERTISEMENT

ಸೂಪರ್‌ಬೆಟ್‌ ಚೆಸ್ ಟೂರ್ನಿ: ಪ್ರಜ್ಞಾನಂದ– ಗುಕೇಶ್ ಪಂದ್ಯ ಡ್ರಾ

ಪಿಟಿಐ
Published 29 ಜೂನ್ 2024, 13:20 IST
Last Updated 29 ಜೂನ್ 2024, 13:20 IST
<div class="paragraphs"><p>ಪ್ರಜ್ಞಾನಂದ </p></div>

ಪ್ರಜ್ಞಾನಂದ

   

-ಪಿಟಿಐ ಚಿತ್ರ

ಬುಖಾರೆಸ್ಟ್‌ (ರುಮೇನಿಯಾ): ಗ್ರ್ಯಾಂಡ್‌ಮಾಸ್ಟರ್ ಆರ್‌.ಪ್ರಜ್ಞಾನಂದ ಅವರು ಸೂಪರ್‌ಬೆಟ್‌ ಕ್ಲಾಸಿಕ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸ್ವದೇಶದ ಡಿ.ಗುಕೇಶ್ ವಿರುದ್ಧ ಮೇಲುಗೈ ಹೊಂದಿದ್ದರೂ, ಅದನ್ನು ಗೆಲುವನ್ನಾಗಿ ಪರಿವರ್ತಿಸಲಾಗದೇ ‘ಡ್ರಾ’ಕ್ಕೆ ಒಪ್ಪಿಕೊಳ್ಳಬೇಕಾಯಿತು.

ADVERTISEMENT

ಹತ್ತು ಆಟಗಾರರ ಈ ಟೂರ್ನಿಯ ಉಳಿದ ನಾಲ್ಕು ಬೋರ್ಡ್‌ಗಳ ಪಂದ್ಯಗಳಲ್ಲೂ ನಿರ್ಣಾಯಕ ಫಲಿತಾಂಶ ಬರಲಿಲ್ಲ. ಎಲ್ಲ ಪಂದ್ಯಗಳು ‘ಡ್ರಾ’ ಆದವು.

ಏಪ್ರಿಲ್‌ನಲ್ಲಿ ನಡೆದಿದ್ದ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಗುಕೇಶ್‌, ಪ್ರಜ್ಞಾನಂದ ಅವರನ್ನು ಸೋಲಿಸಿದ್ದರು. ಇಲ್ಲಿ ಪಂದ್ಯ ಗೆದ್ದು ಸಮಬಲ ಮಾಡುವ ಅವಕಾಶ ಪ್ರಜ್ಞಾನಂದ ಮುಂದಿತ್ತು. ‘ಡ್ರಾ’ ಆಗುವಂತೆ ಕಂಡ ಈ ಮೂರನೇ ಬೋರ್ಡ್‌ ಪಂದ್ಯದ 53ನೇ ನಡೆಯಲ್ಲಿ ಗುಕೇಶ್ ಲೋಪ ಎಸಗಿದ್ದರು. ಆದರೆ ಪ್ರಜ್ಞಾನಂದ ಅವರಿಗೆ ಗೆಲುವಿನ ಸಂಯೋಜನೆ ಕಂಡುಕೊಳ್ಳಲು ಆಗಲಿಲ್ಲ.

ಫ್ರಾನ್ಸ್‌ನ ಮ್ಯಾಕ್ಸಿಮ್‌ ವೇಷಿಯರ್ ಲಗ್ರಾವ್‌ ಕೂಡ ಸ್ವಲ್ಪದರಲ್ಲೇ ಗೆಲುವನ್ನು ತಪ್ಪಿಸಿಕೊಂಡರು. ಅದೂ ಸ್ವದೇಶದ ಅಲಿರೇಜಾ ಫಿರೋಜ್ ವಿರುದ್ಧ. ಪಂದ್ಯ ಮಧ್ಯಮ ಹಂತದಲ್ಲಿದ್ದಾಗ ವೇಷಿಯರ್ ಅವರಿಗೆ ಅನುಕೂಲಕರ ಸ್ಥಿತಿಯಿತ್ತು. ಆದರೆ ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ತೀವ್ರ ಪೈಪೋಟಿಯಿಂದ ಕೂಡಿದ್ದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರು ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಪಾಯಿಂಟ್‌ ಹಂಚಿಕೊಂಡರು.

ಎಲ್ಲಾ ಪಂದ್ಯಗಳು ಡ್ರಾ ಆಗಿರುವ ಕಾರಣ ಗುಕೇಶ್ ಮತ್ತು ಕರುವಾನಾ ಅವರು ಎರಡು ಪಾಯಿಂಟ್‌ಗಳೊಡನೆ ಮುನ್ನಡೆ ಹಂಚಿಕೊಂಡಿದ್ದಾರೆ. ವೇಷಿಯರ್ ಲಗ್ರೇವ್‌, ಪ್ರಜ್ಞಾನಂದ, ಅಲಿರೇಜಾ, ವೆಸ್ಲಿ ಸೊ, ಅನಿಶ್ ಗಿರಿ ಮತ್ತು ನಿಪೊಮ್‌ನಿಷಿ ತಲಾ ಒಂದೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಅಬ್ದುಸತ್ತಾರೋವ್ ಮತ್ತು ಬೊಗ್ದಾನ್ ಡೇನಿಯಲ್ (ರುಮೇನಿಯಾ) ತಲಾ ಒಂದು ಪಾಯಿಂಟ್ಸ್ ಗಳಿಸಿದ್ದಾರೆ.

30ನೇ ಹುಟ್ಟುಹಬ್ಬ ಆಚರಿಸಿದ ಡಚ್‌ ಆಟಗಾರ ಅನಿಶ್‌ ಗಿರಿ, ನಿಪೊಮ್‌ನಿಷಿ ಜೊತೆ ‘ಡ್ರಾ’ ಮಾಡಿಕೊಂಡರೆ, ಬೊಗ್ದಾನ್ ಡೇನಿಯಲ್, ವೆಸ್ಲಿ ಸೊ ಜೊತೆ ಪಾಯಿಂಟ್ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.