ADVERTISEMENT

ಚೆಸ್: 16 ವರ್ಷದ ಗ್ರ್ಯಾಂಡ್‌ಮಾಸ್ಟರ್‌ಗೆ ಮಣಿದ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌

ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್‌ ಚೆಸ್ ಟೂರ್ನಿ

ಪಿಟಿಐ
Published 22 ಫೆಬ್ರುವರಿ 2022, 5:38 IST
Last Updated 22 ಫೆಬ್ರುವರಿ 2022, 5:38 IST
ಆರ್‌. ಪ್ರಜ್ಞಾನಂದ– ಎಎಫ್‌ಪಿ ಚಿತ್ರ
ಆರ್‌. ಪ್ರಜ್ಞಾನಂದ– ಎಎಫ್‌ಪಿ ಚಿತ್ರ   

ಚೆನ್ನೈ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರು ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್‌ ಚೆಸ್ ಟೂರ್ನಿಯಲ್ಲಿ ಸೋಮವಾರ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಆಘಾತ ನೀಡಿದರು.

ಟೂರ್ನಿಯ ಎಂಟನೇ ಸುತ್ತಿನ ಈ ಹಣಾಹಣಿಯಲ್ಲಿ ಕಪ್ಪುಕಾಯಿಗಳೊಂದಿಗೆ ಆಡಿದ 16 ವರ್ಷದ ಪ್ರಜ್ಞಾನಂದ 39 ನಡೆಗಳಲ್ಲಿ ನಾರ್ವೆ ಆಟಗಾರನಿಗೆ ಸೋಲುಣಿಸಿದರು. ಇದರೊಂದಿಗೆ ಸತತ ಮೂರು ಗೇಮ್‌ ಗೆದ್ದು ಮುನ್ನಡೆದಿದ್ದ ಕಾರ್ಲ್‌ಸನ್ ಓಟಕ್ಕೆ ತಡೆಯೊಡ್ಡಿದರು.

ಎಂಟು ಸುತ್ತುಗಳ ಬಳಿಕ ಎಂಟು ಪಾಯಿಂಟ್ಸ್ ಗಳಿಸಿರುವ ಪ್ರಜ್ಞಾನಂದ, ಸದ್ಯ ಜಂಟಿ 12ನೇ ಸ್ಥಾನದಲ್ಲಿದ್ದಾರೆ. ಕಾರ್ಲಸನ್ ಎದುರಿನ ಗೇಮ್‌ಗೂ ಮೊದಲು ಅವರು ಆರ್ಮೇನಿಯಾದ ಲೆವ್ ಅರೋನಿಯನ್‌ ಅವರನ್ನು ಮಣಿಸಿದ್ದರು. ಎರಡು ಡ್ರಾ ಮತ್ತು ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದ್ದರು.

ADVERTISEMENT

ಪ್ರಜ್ಞಾನಂದ ಅವರು ನೆದರ್ಲೆಂಡ್ಸ್‌ನ ಅನೀಶ್ ಗಿರಿ ಮತ್ತು ವಿಯೆಟ್ನಾಂನ ಕ್ವಾಂಗ್‌ ಲಿಯಮ್‌ ಲೆ ಅವರೊಂದಿಗೆ ಡ್ರಾ ಸಾಧಿಸಿದ್ದರೆ, ಎರಿಕ್ ಹ್ಯಾನ್ಸೆನ್‌, ಡಿಂಗ್ ಲಿರೆನ್‌, ಜಾನ್‌ ಕ್ರಿಸ್ಟಾಫ್‌ ದುಡಾ ಮತ್ತು ಶಕರಿಯಾರ್‌ ಮಮೆದ್ಯರೊವ್ ಎದುರು ನಿರಾಸೆ ಕಂಡಿದ್ದರು.

ಕೆಲವು ದಿನಗಳ ಹಿಂದೆ ವಿಶ್ವಚಾಂಪಿಯನ್‌ಷಿಪ್ ಪಂದ್ಯದಲ್ಲಿ ಕಾರ್ಲ್‌ಸನ್‌ಗೆ ಸೋತಿದ್ದ ರಷ್ಯಾದ ಇಯಾನ್ ನೆಪೊಮ್ನಿಯಾಚಿ (19 ಪಾಯಿಂಟ್ಸ್) ಪಟ್ಟಿಯಲ್ಲಿ ಸದ್ಯ ಮೊದಲ ಸ್ಥಾನದಲ್ಲಿದ್ದರೆ, ದಿಂಗ್ ಲಿರೆನ್‌ ಮತ್ತು ಹ್ಯಾನ್ಸೆನ್‌ (ತಲಾ 15 ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.