ನವದೆಹಲಿ: ಭಾರತದ ಪ್ರಣತಿ ನಾಯಕ್ ಮಂಗೋಲಿಯಾದ ಉಲಾನ್‌ಬತಾರ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದರು.
ವಾಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ 23 ವರ್ಷದ ಪ್ರಣತಿ ಅರ್ಹತಾ ಸುತ್ತಿನಲ್ಲಿ ಆರನೇ ಸ್ಥಾನ ಗಳಿಸಿ ಫೈನಲ್ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಒಟ್ಟು 13.364 ಸ್ಕೋರ್ ಕಲೆ ಹಾಕಿದರು. ಪಶ್ಚಿಮ ಬಂಗಾಳದ ಜಿಮ್ನಾಸ್ಟ್ ಮೊದಲ ವಾಲ್ಟ್‌ನಲ್ಲಿ 13.400 ಮತ್ತು ಎರಡನೇ ವಾಲ್ಟ್‌ನಲ್ಲಿ 13.367 ಸ್ಕೋರ್ ಗಳಿಸಿದ್ದರು.
ಚೀನಾದ ಯು ಲಿನ್ಮಿನ್ ಮತ್ತು ಜಪಾನ್‌ನ ಅಯಾಕ ಸಕಗುಚಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಯು ಲಿನ್ಮಿನ್ 14.350 ಮತ್ತು ಅಯಾಕ 13.584 ಸ್ಕೋರ್ ಸಂಪಾದಿಸಿದ್ದರು. ಪ್ರಣತಿ ಅವರ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ನುಡಿಗಳು ಕೇಳಿಬಂದಿವೆ.
ಅವರ ಕೋಚ್ ಮಿನಾರ ಬೇಗಂ ಮಾತನಾಡಿ ‘16 ವರ್ಷಗಳಿಂದ ಅವರಿಗೆ ತರಬೇತಿ ನೀಡುತ್ತಿದ್ದೇನೆ. ಈಗ ಬಹುದೊಡ್ಡ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಸಾಮರ್ಥ್ಯ ಅವರಿಗೆ ಇದೆ’ ಎಂದರು.
ಭಾರತ ಜಿಮ್ನಾಸ್ಟಿಕ್ ಫೆಡರೇಷನ್ ಉಪಾಧ್ಯಕ್ಷ ರಿಯಾಜ್ ಭಾಟಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
‘ಪ್ರಣತಿ ಅವರ ಸಾಧನೆ ಖುಷಿ ತಂದಿದೆ. ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿರುವ ಅವರು ಅಂತರರಾಷ್ಟ್ರೀಯ ಮಟ್ಟದ ಪಕದಕ್ಕೆ ಅರ್ಹರಾಗಿದ್ದರು. ಈಗ ಅವರ ಸಾಮರ್ಥ್ಯಕ್ಕೆ ಅರ್ಹ ಗೌರವ ಸಿಕ್ಕಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.