ಬ್ಯಾಂಕಾಕ್: ಭಾರತದ ಬಿ.ಸಾಯಿ ಪ್ರಣೀತ್ ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋತರು.
ಶುಕ್ರವಾರ ನಡೆದ ಪಂದ್ಯದಲ್ಲಿ ಚೀನಾದ ಲಿ ಶಿ ಫೆಂಗ್ ಅವರು 21–17, 21–23, 21–18 ರಲ್ಲಿ ಭಾರತದ ಆಟಗಾರನನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು. ಗಾಯದ ಕಾರಣ 2022ರ ಋತುವಿನಲ್ಲಿ ಕೆಲ ತಿಂಗಳು ಆಟದಿಂದ ದೂರವುಳಿದಿದ್ದ ಪ್ರಣೀತ್, ಇಲ್ಲಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು.
ಚೀನಾದ ಎದುರಾಳಿ ವಿರುದ್ಧ ಉತ್ತಮ ಆರಂಭ ಪಡೆದಿದ್ದ ಅವರು ಮೊದಲ ಗೇಮ್‌ನಲ್ಲಿ 15–10 ರಿಂದ ಮುನ್ನಡೆ ಸಾಧಿಸಿದ್ದರು. ಮರುಹೋರಾಟದ ನಡೆಸಿದ ಫೆಂಗ್ ಹಿನ್ನಡೆಯನ್ನು 14–15ಕ್ಕೆ ತಗ್ಗಿಸಿದರು. ಆ ಬಳಿಕ ಸತತ ಐದು ಪಾಯಿಂಟ್ಸ್ ಕಲೆಹಾಕಿ ಮುನ್ನಡೆ ಸಾಧಿಸಿದರಲ್ಲದೆ, ಗೇಮ್ ಗೆದ್ದುಕೊಂಡರು.
ಎರಡನೇ ಗೇಮ್‌ನಲ್ಲಿ 10–16 ರಿಂದ ಹಿನ್ನಡೆಯಲ್ಲಿದ್ದರೂ ಮರುಹೋರಾಟ ನಡೆಸಿದ ಪ್ರಣೀತ್, ಗೆಲುವು ಪಡೆದು ಪಂದ್ಯವನ್ನು ಸಮಸ್ಥಿತಿಗೆ ತಂದರು. ನಿರ್ಣಾಯಕ ಗೇಮ್‌ನ ಆರಂಭದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದ ಬಳಿಕ ಫೆಂಗ್ 18–12 ರಲ್ಲಿ ಮೇಲುಗೈ ಪಡೆದರು. ಈ ವೇಳೆ ಪ್ರತಿರೋಧ ಒಡ್ಡಿದ ಪ್ರಣೀತ್, ಹಿನ್ನಡೆಯನ್ನು 18–19ಕ್ಕೆ ತಗ್ಗಿಸಿದರು. ಆದರೆ ಒತ್ತಡವನ್ನು ಮೆಟ್ಟಿನಿಂತ ಫೆಂಗ್ ಎರಡು ಪಾಯಿಂಟ್ಸ್ ಗಳಿಸಿ ಪಂದ್ಯ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.