ADVERTISEMENT

ಪ್ರಣೀತ್‌, ಪ್ರಣಯ್‌ ಮೇಲೆ ನಿರೀಕ್ಷೆ

ಇಂದಿನಿಂದ ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 1 ಜುಲೈ 2019, 20:00 IST
Last Updated 1 ಜುಲೈ 2019, 20:00 IST
ಎಚ್‌.ಎಸ್‌.ಪ್ರಣಯ್‌–ಪಿಟಿಐ ಚಿತ್ರ
ಎಚ್‌.ಎಸ್‌.ಪ್ರಣಯ್‌–ಪಿಟಿಐ ಚಿತ್ರ   

ಕ್ಯಾಲ್ಗರಿ, ಕೆನಡಾ: ಬಿ.ಸಾಯಿ ಪ್ರಣೀತ್‌ ಹಾಗೂ ಎಚ್‌.ಎಸ್‌.ಪ್ರಣಯ್‌ ಸೇರಿದಂತೆ ಭಾರತದ ಆಟಗಾರರು ಮಂಗಳವಾರದಿಂದ ನಡೆಯುವ ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ಅರ್ಹತಾ ಸುತ್ತುಗಳೊಂದಿಗೆ ಟೂರ್ನಿ ಆರಂಭವಾಗಲಿದೆ.

ಪ್ರಮುಖ ಆಟಗಾರರಾದ ಕಿಡಂಬಿ ಶ್ರೀಕಾಂತ್‌, ಸೈನಾ ನೆಹ್ವಾಲ್‌ ಹಾಗೂ ಪಿ.ವಿ.ಸಿಂಧು ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಸುಮಾರು ₹ 51 ಲಕ್ಷ ಮೊತ್ತದ ಟೂರ್ನಿ ಇದಾಗಿದ್ದು, ಭಾರತದ ಹಲವು ಪುರುಷ ಆಟಗಾರರು ಪ್ರಶಸ್ತಿಗಾಗಿ ಪೈಪೋಟಿ ನಡೆಸುವರು.

2017ರ ಸಿಂಗಪುರ ಓಪನ್‌ ಚಾಂಪಿಯನ್‌ ಪ್ರಣೀತ್‌ ಅವರು ಟೂರ್ನಿಯ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು, ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ನಿಕೋಲಸ್‌ ರಾಬರ್ಟ್ ಹೆನ್ಸನ್‌ ವಾಲರ್‌ ಅಥವಾ ಚೀನಾದ ಸುನ್‌ ಫೆಯ್ ಕ್ಸಿಯಾಂಗ್‌ ಅವರನ್ನು ಎದುರಿಸುವರು.

ADVERTISEMENT

ಇನ್ನೊಂದೆಡೆಪ್ರಣಯ್ ಅವರಿಗೆ ಆನಾರೋಗ್ಯದ ಕಾರಣ ಈ ವರ್ಷ ಉತ್ತಮ ಪ್ರದರ್ಶನ ನೀಡಲಾಗಿಲ್ಲ. ಇದೇ ಕಾರಣಕ್ಕಾಗಿ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 26ನೇ ಸ್ಥಾನಕ್ಕೆ ಇಳಿದಿದ್ದರು. ಪ್ರಣಯ್‌ ಕೂಡ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್ ಚಾಂಪಿಯನ್‌ ಆಗಿದ್ದ ಪರುಪಳ್ಳಿ ಕಶ್ಯಪ್‌ ಕೂಡ ಕಣಕ್ಕಿಳಿಯಲಿದ್ದು, ಉತ್ತಮ ಪ್ರದರ್ಶನ ಮುಂದುವರಿಸುವ ಸಾಧ್ಯತೆ ಇದೆ. ಭಾರತದ ಇತರ ಆಟಗಾರರಾದ ರಾಷ್ಟ್ರೀಯ ಚಾಂಪಿಯನ್‌ ಸೌರಭ್‌ ವರ್ಮಾ, ಅಜಯ್‌ ಜೈರಾಮ್‌ ಹಾಗೂ ಯುವ ಆಟಗಾರ ಲಕ್ಷ್ಯ ಸೇನ್‌ ಸವಾಲಿಗೆ ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.