ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದ ಭಾರತದ ಎಚ್.ಎಸ್. ಪ್ರಣಯ್ ಅವರು ಮಂಗಳವಾರ ಪ್ರಕಟಗೊಂಡ ಡಬ್ಲ್ಯುಟಿಎ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನಕ್ಕೆ ಏರುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
31 ವರ್ಷದ ಪ್ರಣಯ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ವಿಕ್ಟರ್ ಆಕ್ಸೆಲ್ಸೆನ್ ಅವರಿಗೆ ಆಘಾತ ನೀಡಿದ್ದರು. 9ನೇ ಸ್ಥಾನದಲ್ಲಿದ್ದ ಪ್ರಣಯ್ ಅವರು ಮೂರು ಸ್ಥಾನ ಬಡ್ತಿ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಉತ್ತಮ ಲಯದಲ್ಲಿರುವ ಅವರು, ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಆಗುವ ಜತೆಗೆ, ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು.
ವಿಶ್ವ ಚಾಂಪಿಯನ್‌ಷಿಪ್‌ನ 16 ಘಟ್ಟದಲ್ಲಿ ನಿರ್ಗಮಿಸಿದ ಭಾರತದ ಲಕ್ಷ್ಯ ಸೇನ್ ಅವರು ಒಂದು ಸ್ಥಾನವನ್ನು ಕಳೆದುಕೊಂಡು, 12ನೇ ರ‍್ಯಾಂಕ್‌ನಲ್ಲಿದ್ದಾರೆ. ಕಿದಂಬಿ ಶ್ರೀಕಾಂತ್ 20ನೇ ಸ್ಥಾನದಲ್ಲಿ ಮುಂದುವರಿದ್ದಾರೆ. ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದರು.
ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಒಂದು ಸ್ಥಾನ ಬಡ್ತಿ ಪಡೆದು, 14ನೇ ರ‍್ಯಾಂಕ್ ಗಳಿಸಿದ್ದಾರೆ. ಅವರು ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ಬೈ ಪಡೆದು, ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.
ಪುರುಷರ ಡಬಲ್ಸ್‌ನ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಎರಡನೇ ರ‍್ಯಾಂಕ್‌ನಲ್ಲಿ ಮುಂದುವರಿದಿದ್ದಾರೆ. ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದರು.
ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು ಎರಡು ಸ್ಥಾನ ಬಡ್ತಿ ಪಡೆದು, 17ನೇ ಕ್ರಮಾಂಕಕ್ಕೆ ಏರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.