ಸಿಡ್ನಿ: ಭಾರತದ ಎಚ್.ಎಸ್.ಪ್ರಣಯ್ ಮತ್ತು ಸಮೀರ್ ವರ್ಮಾ ಅವರು ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಐದನೇ ಶ್ರೇಯಾಂಕದ ಪ್ರಣಯ್ 16ರ ಸುತ್ತಿನ ಪಂದ್ಯದಲ್ಲಿ ಇಸ್ರೇಲ್‌ನ ಮಿಶಾ ಜಿಲ್ಬರ್ಮನ್ ಅವರನ್ನು 21-17, 21-15 ರಿಂದ ಸೋಲಿಸಲು ಕೇವಲ 46 ನಿಮಿಷ ತೆಗೆದುಕೊಂಡರು. ಅವರು ಮುಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಕೊಡೈ ನರೋಕಾ (ಜಪಾನ್) ಅವರನ್ನು ಎದುರಿಸಲಿದ್ದಾರೆ.
ಒಂದು ಗಂಟೆ ಎರಡು ನಿಮಿಷ ನಡೆದ ಪಂದ್ಯದಲ್ಲಿ ಸಮೀರ್ ವರ್ಮಾ ಅವರು 21–14, 14–21, 21–19ರಿಂದ ಎಂಟನೇ ಶ್ರೇಯಾಂಕದ ಲೋಹ್ ಕೀನ್ ಯೂ (ಸಿಂಗಪುರ) ಅವರನ್ನು ಹಿಮ್ಮೆಟ್ಟಿಸಿದರು.
ಕಿರಣ್ ಜಾರ್ಜ್ 20-22, 6-21ರಲ್ಲಿ ಜಪಾನ್‌ನ ಏಳನೇ ಶ್ರೇಯಾಂಕದ ಕೆಂಟಾ ನಿಶಿಮೊಟೊ ಅವರಿಗೆ ಸೋತರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಅವರು 21-16, 21-13 ರಿಂದ ಆಸ್ಟ್ರೇಲಿಯಾದ ಕೈ ಕ್ವಿ ಬರ್ನಿಸ್ ಟಿಯೊಹ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಆದರೆ ಎರಡನೇ ಸುತ್ತಿನಲ್ಲಿ ಅನುಪಮಾ ಉಪಾಧ್ಯಾಯ 11-21, 18-21ರಲ್ಲಿ ಆರನೇ ಶ್ರೇಯಾಂಕದ ಪುತ್ರಿ ಕುಸುಮಾ ವಾರ್ದಾನಿ (ಇಂಡೊನೇಷ್ಯಾ) ವಿರುದ್ಧ ಸೋತರೆ, ಮಾಳವಿಕಾ ಬನ್ಸೋಡ್ 17–21, 21–23 ಅಂತರದಲ್ಲಿ ಇಂಡೊನೇಷ್ಯಾದ ಎಸ್ಟರ್ ನುರುಮಿ ಟ್ರಿ ವಾರ್ಡೊಯೊ ವಿರುದ್ಧ ಪರಾಭವಗೊಂಡರು.
ಮಹಿಳೆಯರ ಡಬಲ್ಸ್‌ನಲ್ಲಿ ಪಾಂಡಾ ಸಹೋದರಿಯರಾದ ರುತಪರ್ಣ ಮತ್ತು ಶ್ವೇತಪರ್ಣ 5–21, 9–21 ಅಂತರದಲ್ಲಿ ಮಲೇಷ್ಯಾದ ಪೀ ಜಿಂಗ್ ಲೈ ಮತ್ತು ಚಿವ್ ಸಿಯೆನ್ ಲಿಮ್ ಎದುರು ಸೋಲನುಭವಿಸಿದರು.
ಮಿಶ್ರ ಡಬಲ್ಸ್ ಜೋಡಿ ಬಿ.ಸುಮೀತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು 21-11, 21-11ರಿಂದ ಆಸ್ಟ್ರೇಲಿಯಾದ ಕೈ ಚೆನ್ ಟಿಯೋಹ್ ಮತ್ತು ಕೈ ಕ್ವಿ ಬರ್ನಿಸ್ ಟಿಯೊಹ್ ಅವರನ್ನು ಸೋಲಿಸಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಇವರಿಬ್ಬರು ಅಗ್ರ ಶ್ರೇಯಾಂಕದ ಚೀನಾದ ಝೆನ್ ಬಾಂಗ್ ಜಿಯಾಂಗ್ ಮತ್ತು ಯಾ ಕ್ಸಿನ್ ವೀ ವಿರುದ್ಧ ಸೆಣಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.