ADVERTISEMENT

ವುಷು ವಿಶ್ವ ಚಾಂಪಿಯನ್‌ಷಿಪ್‌: ಪ್ರವೀಣಕುಮಾರ್‌ ಚಿನ್ನದ ನಗು

ಭಾರತಕ್ಕೆ ನಾಲ್ಕು ಪದಕ

ಪಿಟಿಐ
Published 23 ಅಕ್ಟೋಬರ್ 2019, 11:21 IST
Last Updated 23 ಅಕ್ಟೋಬರ್ 2019, 11:21 IST
ಕೋಚ್‌ಗಳೊಂದಿಗೆ ಪ್ರವೀಣ ಕುಮಾರ್‌–ಟ್ವಿಟರ್‌ ಚಿತ್ರ
ಕೋಚ್‌ಗಳೊಂದಿಗೆ ಪ್ರವೀಣ ಕುಮಾರ್‌–ಟ್ವಿಟರ್‌ ಚಿತ್ರ   

ಶಾಂಘೈ:ಭಾರತದ ಪ್ರವೀಣಕುಮಾರ್‌ ವಿಶ್ವ ವುಷು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಹೊಳಪು ಮೂಡಿಸಿದ್ದಾರೆ. ಇದರೊಂದಿಗೆ ಪುರುಷರ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಭಾರತದ ಮೊದಲ ಪಟು ಎಂಬ ಹಿರಿಮೆ ಅವರದಾಗಿದೆ.

ಬುಧವಾರ ಪುರುಷರ 48 ಕೆಜಿ ಸ್ಯಾಂಡಾ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಅವರು ಪಿಲಿಪ್ಪೀನ್ಸ್‌ನ ರಸೆಲ್‌ ಡಿಯಾಜ್‌ ಅವರನ್ನು 2–1ರಿಂದ ಮಣಿಸಿದರು.

ಇಲ್ಲಿ ನಡೆದದ್ದು 15ನೇ ವುಷು ಚಾಂಪಿಯನ್‌ಷಿಪ್‌. ಭಾರತದ ಪಟು ಮಂಗಳವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಖಸನ್‌ ಇಕ್ರಮೊವ್‌ ಎದುರು 2–0ಯಿಂದ ಜಯದ ನಗೆ ಬೀರಿದ್ದರು.

ADVERTISEMENT

ಈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧೆಯಲ್ಲಿದ್ದ ಭಾರತದ ಪೂನಮ್‌ (75 ಕೆಜಿ ವಿಭಾಗ), ಸನಾತೊಯ್‌ ದೇವಿ (52 ಕೆಜಿ) ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಗೆರೆ ಮೂಡಿಸಿದರು. ಪುರುಷರ 60 ಕೆಜಿ ವಿಭಾಗದಲ್ಲಿ ವಿಕ್ರಾಂತ್‌ ಬಲಿಯಾನ್‌ ಅವರಿಗೆ ಕಂಚು ಒಲಿಯಿತು.

ಚಾಂಪಿಯನ್‌ಷಿಪ್‌ನ ಸ್ಯಾಂಡಾ ವಿಭಾಗದಲ್ಲಿ ಭಾರತ ತಂಡ ಒಟ್ಟು ನಾಲ್ಕು ಪದಕಗಳೊಂದಿಗೆ (ಒಂದು ಚಿನ್ನ, ಎರಡು ಬೆಳ್ಳಿ, ಒಂದು ಕಂಚು) ಮೂರನೇ ಸ್ಥಾನ ಗಳಿಸಿತು.

2017ರಲ್ಲಿ ಪೂಜಾ ಕಡಿಯಾನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪಟು ಎನಿಸಿಕೊಂಡಿದ್ದರು. ಮಹಿಳೆಯರ 75 ಕೆಜಿ ಸ್ಯಾಂಡಾ ವಿಭಾಗದ ಫೈನಲ್‌ ಪಂದ್ಯದಲ್ಲಿ ಅವರು ರಷ್ಯಾದ ಇವ್‌ಜೆನಿಯಾ ಸ್ಟೆಪಾನೊವಾ ಅವರನ್ನು ಪರಾಭವಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.