ADVERTISEMENT

ಜಯದ ರಾಕೆಟ್ ಉಡಾಯಿಸುವುದೇ ರ‍್ಯಾಪ್ಟರ್ಸ್‌?

ವಿಕ್ರಂ ಕಾಂತಿಕೆರೆ
Published 6 ಜನವರಿ 2019, 19:30 IST
Last Updated 6 ಜನವರಿ 2019, 19:30 IST
ಕಿದಂಬಿ ಶ್ರೀಕಾಂತ್‌
ಕಿದಂಬಿ ಶ್ರೀಕಾಂತ್‌   

ಒಮ್ಮೆ ಬಂಗಾ ಬೀಟ್ಸ್‌, ಮತ್ತೊಮ್ಮೆ ಬೆಂಗಳೂರು ಟಾಪ್‌ಗನ್ಸ್‌, ಮತ್ತೆ ಎರಡು ಬಾರಿ ಬೆಂಗಳೂರು ಬ್ಲಾಸ್ಟರ್ಸ್‌... ವಿಭಿನ್ನ ಹೆಸರುಗಳಲ್ಲಿ ‌ಕಣಕ್ಕೆ ಇಳಿದಿದ್ದ ಬೆಂಗಳೂರಿನ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ (ಪಿಬಿಎಲ್‌) ಸಾಧನೆಯ ಮೆಟ್ಟಿಲನ್ನು ನಿಧಾನಕ್ಕೆ ಏರುತ್ತ ಬಂದಿದೆ. ಈ ಬಾರಿ ಬೆಂಗಳೂರು ರ‍್ಯಾಪ್ಟರ್ಸ್ ಎಂಬ ಹೆಸರಿನಲ್ಲಿ ಕಣಕ್ಕೆ ಇಳಿದಿರುವ ತಂಡ ಕಿದಂಬಿ ಶ್ರೀಕಾಂತ್‌ ಅವರ ನಾಯಕತ್ವದಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಆರು ತಂಡಗಳು ಪಾಲ್ಗೊಂಡಿದ್ದ ಮೊದಲ ಎರಡು ಆವೃತ್ತಿಗಳಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದ್ದ ತಂಡ ಆರು ಸ್ಪರ್ಧಿಗಳಿದ್ದ ಮೂರನೇ ಆವೃತ್ತಿಯಲ್ಲಿ ಐದನೇ ಸ್ಥಾನಕ್ಕೆ ‘ಏರಿ’ ಸುಧಾರಿಸಿಕೊಂಡಿತ್ತು. ಕಳೆದ ಬಾರಿ ಮೊದಲ ಬಾರಿ ಎಂಟು ತಂಡಗಳು ಪಾಲ್ಗೊಂಡಿದ್ದವು. ಬೆಂಗಳೂರು ರನ್ನರ್ ಅಪ್ ಆಗಿ ಗಮನಾರ್ಹ ಸಾಧನೆ ಮಾಡಿತು. ಒಂಬತ್ತು ತಂಡಗಳಿರುವ ಐದನೇ ಆವೃತ್ತಿಯು ಮುಂಬೈ, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ಲೆಗ್‌ಗಳನ್ನು ಮುಗಿಸಿ ಬೆಂಗಳೂರಿಗೆ ಕಾಲಿಟ್ಟಿದೆ. ಜನವರಿ ಏಳರಿಂದ ಇಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಚೇತರಿಸಿಕೊಂಡು ಪ್ರಶಸ್ತಿ ಎತ್ತಿ ಹಿಡಿಯುವ ಹವಣಕೆಯಲ್ಲಿದೆ ತಂಡ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸುತ್ತಿರುವುದರಿಂದ ರ‍್ಯಾಪ್ಟರ್ಸ್‌ನ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಭರವಸೆ ಮೂಡಿದೆ.

ಹೈದರಾಬಾದ್, ದೆಹಲಿ ಮತ್ತು ಚೆನ್ನೈ ತಂಡಗಳು ಹಿಂದಿನ ನಾಲ್ಕು ಆವೃತ್ತಿಗಳಲ್ಲಿ ಪ್ರಶಸ್ತಿಗಳನ್ನು ಹಂಚಿಕೊಂಡಿವೆ. ಹೈದರಾಬಾದ್ ಎರಡು ಬಾರಿ ಚಾಂಪಿಯನ್ ಆಗಿದ್ದರೆ, ಮುಂಬೈ ಎರಡು ಬಾರಿ ಮತ್ತು ಅವಧ್ ವಾರಿಯರ್ಸ್ ಒಮ್ಮೆ ರನ್ನರ್ ಅಪ್ ಆಗಿದೆ. ಪ್ರಶಸ್ತಿ ಗೆಲ್ಲಲಾಗದ ಮುಂಬೈ ಮತ್ತು ಅಹಮದಾಬಾದ್ ತಂಡಗಳು ಈ ಬಾರಿ ಆರಂಭದಿಂದಲೇ ಉತ್ತಮ ಸಾಮರ್ಥ್ಯ ತೋರುತ್ತಿವೆ. ನಾರ್ತ್ ಈಸ್ಟರ್ನ್ ವಾರಿಯರ್ಸ್ ಕೂಡ ಉತ್ತಮ ಲಯದಲ್ಲಿವೆ. ಹೀಗಾಗಿ ತವರಿನ ಎರಡು ಲೀಗ್ ಪಂದ್ಯಗಳು ಬೆಂಗಳೂರು ರ‍್ಯಾಪ್ಟರ್ಸ್‌ಗೆ ಮಹತ್ವದ್ದು.

ADVERTISEMENT

ತವರು ಒಂದೇ; ನಾನಾ ಹೆಸರು: ಅವಧ್ ವಾರಿಯರ್ಸ್ ಹೊರತು ಪಡಿಸಿದರೆ ಪಿಬಿಎಲ್‌ನಲ್ಲಿ ವಿವಿಧ ನಗರಗಳನ್ನು ಪ್ರತಿನಿಧಿಸುವ ಎಲ್ಲ ತಂಡಗಳೂ ವಿವಿಧ ಆವೃತ್ತಿಗಳಲ್ಲಿ ಹೆಸರನ್ನು ಬದಲಿಸಿಕೊಂಡಿವೆ. ದೆಹಲಿ ಪ್ರತಿನಿಧಿಸುವ ತಂಡ ಡೆಲ್ಲಿ ಸ್ಮ್ಯಾಷರ್ಸ್‌, ಡೆಲ್ಲಿ ಏಸರ್ಸ್‌, ಡೆಲ್ಲಿ ಡ್ಯಾಷರ್ಸ್‌ ಎಂಬ ಹೆರುಗಳನ್ನು ಹೊಂದಿತ್ತು. ಈ ಬಾರಿ ‘ಡ್ಯಾಷರ್ಸ್‌’ ಅನ್ನು ಉಳಿಸಿಕೊಂಡಿದೆ. ಮುಂಬೈ ತಂಡ ಮುಂಬೈ ಮರಾಠಾಸ್‌, ಮುಂಬೈ ಮಾಸ್ಟರ್ಸ್‌, ಮುಂಬೈ ರಾಕೆಟ್ಸ್‌ ಮುಂತಾದ ಹೆಸರುಗಳನ್ನು ಹೊಂದಿತ್ತು. ಈ ಬಾರಿ ‘ರಾಕೆಟ್ಸ್‌’ ಆಗಿಯೇ ಉಳಿದೆ. ಹೈದರಾಬಾದ್ ತಂಡ ಹೈದರಾಬಾದ್ ಹಂಟರ್ಸ್‌, ಹೈದರಾಬಾದ್ ಹಾಟ್‌ಶಾಟ್ಸ್‌ ಮುಂತಾದ ಹೆಸರುಗಳನ್ನು ಹೊಂದಿತ್ತು. ಈ ಬಾರಿ ಮತ್ತೆ ಹಂಟರ್ಸ್ ಆಗಿಯೇ ಕಣಕ್ಕೆ ಇಳಿದಿದೆ. ಮೊದಲ ಆವೃತ್ತಿಯಲ್ಲಿ ಪಿಸ್ಟನ್ಸ್‌ ಹೆಸರಿನಲ್ಲಿ ಆಡಿದ್ದ ಪುಣೆ ತಂಡ ಈ ಬಾರಿ ಮತ್ತೆ ಕಾಣಿಸಿಕೊಂಡಿದ್ದು ಹೆಸರನ್ನು ಪುಣೆ ಸೆವೆನ್ ಏಸಸ್‌ ಎಂದು ಬದಲಿಸಿಕೊಂಡಿದೆ. ಕಳೆದ ಬಾರಿ ಮೊದಲ ಸಲ ಕಾಣಿಸಿಕೊಂಡಿದ್ದ ಅಹಮದಾಬಾದ್ ಸ್ಮ್ಯಾಷ್ ಮಾಸ್ಟರ್ಸ್‌ ಮತ್ತು ನಾರ್ತ್ ಈಸ್ಟರ್ನ್ ವಾರಿಯರ್ಸ್‌ ಅದೇ ಹೆಸರುಗಳಲ್ಲಿ ಈ ಬಾರಿಯೂ ಆಡುತ್ತಿವೆ.

ಕಿದಂಬಿ–ಸಾಯಿ ಮೇಲೆ ಭರವಸೆ

ಅರವಿಂದ ಭಟ್ ಈಗ ರ‍್ಯಾಪ್ಟರ್ಸ್‌ನ ತರಬೇತುದಾರ. ರ‍್ಯಾಪ್ಟರ್ಸ್‌ಗೆ ಕಿದಂಬಿ ಶ್ರೀಕಾಂತ್ ಮತ್ತು ಸಾಯಿ ಪ್ರಣೀತ್ ಅವರ ಬಲವಿದೆ. ಇವರಿಬ್ಬರನ್ನು ಬಿಟ್ಟರೆ ತಂಡಕ್ಕೆ ಪ್ರಭಾವಿ ಆಟಗಾರರ ಕೊರತೆ ಕಾಡುತ್ತಿದೆ. ಎರಡನೇ ಆವೃತ್ತಿಯಲ್ಲಿ ಕಿದಂಬಿ ಶ್ರೀಕಾಂತ್ ಬೆಂಗಳೂರು ಪರ ಆಡಿದ್ದರು. ಮೊದಲ ಆವೃತ್ತಿಯಲ್ಲಿದ್ದ ಪರುಪಳ್ಳಿ ಕಶ್ಯಪ್‌, ಎರಡು ಮತ್ತು ಮೂರನೇ ಆವೃತ್ತಿಯಲ್ಲಿ ಬಲ ತುಂಬಿದ್ದ ಅಶ್ವಿನಿ ಪೊನ್ನಪ್ಪ, ಕಳೆದ ಬಾರಿ ಇದ್ದ ವಿಕ್ಟರ್ ಅಕ್ಸೆಲ್ಸನ್ ಈಗ ಬೇರೆ ಬೇರೆ ಫ್ರಾಂಚೈಸ್‌ಗಳ ಪಾಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.