ADVERTISEMENT

ಪ್ರೊ ಕಬಡ್ಡಿ ಲೀಗ್‌: ಪುಣೇರಿ ದಿಗ್ವಿಜಯ; ಬೆಂಗಳೂರು ಬುಲ್ಸ್ ಪರಾಜಯ

ಜೈಪುರ್ ಪಿಂಕ್‌ ಪ್ಯಾಂಥರ್ಸ್‌ಗೆ ಮಣಿದ ಯು.ಪಿ. ಯೋಧಾ

ವಿಕ್ರಂ ಕಾಂತಿಕೆರೆ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
<div class="paragraphs"><p>ಬೆಂಗಳೂರು ಬುಲ್ಸ್ ಆಟಗಾರರಿಂದ ಪಾರಾಗಲು ಪ್ರಯತ್ನಿಸಿದ ಪುಣೇರಿ ಪಲ್ಟನ್ ತಂಡದ ಮೋಹಿತ್ ಗೋಯತ್</p></div>

ಬೆಂಗಳೂರು ಬುಲ್ಸ್ ಆಟಗಾರರಿಂದ ಪಾರಾಗಲು ಪ್ರಯತ್ನಿಸಿದ ಪುಣೇರಿ ಪಲ್ಟನ್ ತಂಡದ ಮೋಹಿತ್ ಗೋಯತ್

   

ಪುಣೆ: ಕಿಕ್ಕಿರಿದು ತುಂಬಿದ್ದ ತವರಿನ ಪ್ರೇಕ್ಷಕರ ಶಿಳ್ಳೆ–ಕೇಕೆಯ ಮಧ್ಯೆ ಬೆಂಗಳೂರು ಬುಲ್ಸ್ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿತು.

ಇಲ್ಲಿನ ಬಾಲೇವಾಡಿಯ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಪುಣೇರಿ 43–18 ಜಯ ಗಳಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.

ADVERTISEMENT

ಸತತ ಸೋಲಿನಿಂದ ಚೇತರಿಸಿಕೊಂಡು ಹಿಂದಿನ 2 ಪಂದ್ಯಗಳಲ್ಲಿ ಗೆದ್ದಿದ್ದ ಬುಲ್ಸ್ ಮತ್ತೆ ಮುಗ್ಗರಿಸಿತು. 3 ಮತ್ತು 9ನೇ ನಿಮಿಷಗಳಲ್ಲಿ ಎದುರಾಳಿಗಳನ್ನು ಆಲೌಟ್ ಮಾಡುವ ಮೂಲಕ 28–8ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಪುಣೇರಿ ದ್ವಿತೀಯಾರ್ಧದಲ್ಲೂ ಭರ್ಜರಿ ಆಟವಾಡಿತು.   

ರೇಡರ್ ಮೋಹಿತ್ ಗೋಯತ್ 8 ಪಾಯಿಂಟ್ ಗಳಿಸಿದರೆ ಆಲ್‌ರೌಂಡರ್ ಮಹಮ್ಮದ್ ರೇಜಾ 7 ಮತ್ತು ನಾಯಕ, ಆಲ್‌ರೌಂಡರ್ ಅಸ್ಲಾಂ ಮುಸ್ತಫಾ 6 ಪಾಯಿಂಟ್ ಕಲೆ ಹಾಕಿದರು. ಬುಲ್ಸ್‌ಗಾಗಿ ಆಲ್‌ರೌಂಡರ್ ರೋಹಿತ್ ಕುಮಾರ್ 6 ಪಾಯಿಂಟ್ ಕಲೆ ಹಾಕಿದರೆ ರೇಡಿಂಗ್‌ನಲ್ಲಿ ವಿಕಾಸ್ ಖಂಡೋಲಾ (5 ಪಾಯಿಂಟ್) ಮಾತ್ರ ಮಿಂಚಿದರು.

ರಕ್ಷಿತ್ ಪೂಜಾರಿ ಪದಾರ್ಪಣೆ: ಬುಲ್ಸ್‌ನಲ್ಲಿರುವ ಏಕೈಕ ಕನ್ನಡಿಗ ರಕ್ಷಿತ್ ಪೂಜಾರಿ ದ್ವಿತೀಯಾರ್ಧದಲ್ಲಿ ಮ್ಯಾಟ್‌ಗೆ ಇಳಿಯುವ ಮೂಲಕ ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿದರು.

ಯೋಧಾ ಮಣಿಸಿದ ಜೈಪುರ: ಬುಧವಾರದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ 41–24ರಲ್ಲಿ ಯು.ಪಿ.ಯೋಧಾವನ್ನು ಮಣಿಸಿತು. ಚುರುಕಿನ ರೇಡರ್‌ಗಳಾದ ನಾಯಕ ಪ್ರದೀಪ್ ನರ್ವಾಲ್ ಮತ್ತು ಸುರೇಂದರ್ ಗಿಲ್ ಅವರನ್ನು ಒಳಗೊಂಡ ಯೋಧಾ ಮೊದಲಾರ್ಧದಲ್ಲಿ 9–24ರ ಹಿನ್ನಡೆ ಅನುಭವಿಸಿದ್ದರೂ ದ್ವಿತೀಯಾರ್ಧದ ಅರಂಭದಲ್ಲಿ ಚೇತರಿಸಿಕೊಂಡು ಹಿನ್ನಡೆಯನ್ನು 20–29ಕ್ಕೆ ಇಳಿಸಿತು. ಆದರೆ ಕೊನೆಯ 10 ನಿಮಿಷಗಳಲ್ಲಿ 12 ಪಾಯಿಂಟ್ ಗಳಿಸಿ ಜೈಪುರ ಜಯಭೇರಿ ಮೊಳಗಿಸಿತು. 

ತಂಡಕ್ಕಾಗಿ ಅರ್ಜುನ್ ದೇಶ್ವಾಲ್ ರೇಡಿಂಗ್‌ನಲ್ಲಿ 13 ಪಾಯಿಂಟ್ ಕಲೆ ಹಾಕಿದರು. 

ಇಂದು ಬಿಡುವು: ಲೀಗ್‌ನ ನಾಲ್ಕನೇ ಲೆಗ್‌ ನಾಳೆಯಿಂದ ಚೆನ್ನೈಯಲ್ಲಿ ನಡೆಯಲಿದ್ದು ಇಂದು ಪಂದ್ಯಗಳು ಇರುವುದಿಲ್ಲ.

ನಾಳೆಯ ಪಂದ್ಯಗಳು

ತಮಿಳ್ ತಲೈವಾಸ್–ಪಟ್ನಾ ಪೈರೇಟ್ಸ್‌ (ರಾತ್ರಿ 8.00)

ಹರಿಯಾಣ ಸ್ಟೀಲರ್ಸ್‌– ತೆಲುಗು ಟೈಟನ್ಸ್ (ರಾತ್ರಿ 9.00)

ಪುಣೇರಿ ಪಲ್ಟನ್ ತಂಡದ ನಾಯಕ ಅಸ್ಲಂ ಮುಸ್ತಫಾ ಇನಾಮ್ದಾರ್ ಅವರನ್ನು ಹಿಡಿಯಲು ಪ್ರಯತ್ನಿಸಿದ ಬೆಂಗಳೂರು ಬುಲ್ಸ್ ಆಟಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.