ಪಂಚಕುಲಾ, ಹರಿಯಾಣ: ಅಂತಿಮ ಕ್ಷಣದಲ್ಲಿ ಕಾಶಿಲಿಂಗ ಅಡಕೆ ಮಾಡಿದ ಎಡವಟ್ಟಿನಿಂದಾಗಿ ಬೆಂಗಳೂರು ಬುಲ್ಸ್ ತಂಡದ ಗೆಲುವಿನ ಕನಸು ಕಮರಿತು.
ಇಲ್ಲಿನ ತವು ದೇವಿಲಾಲ್ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಬುಲ್ಸ್ ಮತ್ತು ಪಟ್ನಾ ಪೈರೇಟ್ಸ್ ನಡುವಣ ಪ್ರೊ ಕಬಡ್ಡಿ ಲೀಗ್‌ನ ಪಂದ್ಯ 40–40 ಪಾಯಿಂಟ್ಸ್‌ನಿಂದ ಸಮಬಲವಾಯಿತು.
ಪಂದ್ಯ ಮುಗಿಯಲು 20 ಸೆಕೆಂಡುಗಳು ಬಾಕಿ ಇದ್ದಾಗ ಬುಲ್ಸ್ 40–37ರಿಂದ ಮುಂದಿತ್ತು. ಕಾಶಿಲಿಂಗ್ ಅವರು ವಿಕಾಸ್ ಜಗ್ಲಾನ್ ಅವರನ್ನು ಹಿಡಿಯಲು ಅವಸರಿಸಿದರು. ಹೀಗಾಗಿ ಪಟ್ನಾ ಖಾತೆಗೆ ಬೋನಸ್ ಸಹಿತ ಎರಡು ಪಾಯಿಂಟ್ ಸೇರ್ಪಡೆಯಾದವು. ಹೀಗಿದ್ದರೂ ಬುಲ್ಸ್ 40–39ರಿಂದ ಮುನ್ನಡೆ ಹೊಂದಿತ್ತು.‘ಡು ಆರ್ ಡೈ’ ರೇಡ್‌ನಲ್ಲಿ ಬುಲ್ಸ್ ತಂಡದ ಪವನ್ ಶೆರಾವತ್ ಅವರನ್ನು ರಕ್ಷಣಾ ಬಲೆಯೊಳಗೆ ಕೆಡವಿದ ಪಟ್ನಾ ಆಟಗಾರರು ಸಂಭ್ರಮಿಸಿದರು.
ಪಟ್ನಾ ತಂಡದ ನಾಯಕ ಪ್ರದೀಪ್ ನರ್ವಾಲ್ 17 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಅವರು 22 ರೇಡ್‌ಗಳನ್ನು ಮಾಡಿದರು. ಬುಲ್ಸ್ ತಂಡದ ನಾಯಕ 16 ಪಾಯಿಂಟ್ಸ್ ಸಂಗ್ರಹಿಸಿದರು.
ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದವು. ಐದು ನಿಮಿಷಗಳ ಆಟ ಮುಗಿದಾಗ ಪಟ್ನಾ ತಂಡ 5–4ರಿಂದ ಮುಂದಿತ್ತು. 16ನೇ ನಿಮಿಷದಲ್ಲಿ ಎದುರಾಳಿಗಳ ಆವರಣ ಖಾಲಿ ಮಾಡಿದ ಬುಲ್ಸ್ 17–11ರ ಮುನ್ನಡೆ ತನ್ನದಾಗಿಸಿಕೊಂಡಿತು.
ಮೊದಲಾರ್ಧದ ಆಟ ಮುಗಿದಾಗ 11–20ರಿಂದ ಹಿಂದಿದ್ದ ಪಟ್ನಾ ತಂಡ ದ್ವಿತೀಯಾರ್ಧದಲ್ಲಿ ಮೋಡಿ ಮಾಡಿತು. 24ನೇ ನಿಮಿಷದಲ್ಲಿ ಬುಲ್ಸ್ ತಂಡವನ್ನು ಆಲೌಟ್ ಮಾಡಿದ ಪ್ರದೀಪ್ ಪಡೆ 21–21ರಲ್ಲಿ ಸಮಬಲ ಸಾಧಿಸಿತು. ನಂತರ ಈ ತಂಡ 26–22ರಿಂದ ಮುನ್ನಡೆ ಪಡೆಯಿತು. 33ನೇ ನಿಮಿಷದಲ್ಲಿ ತಿರುಗೇಟು ನೀಡಿದ ಬುಲ್ಸ್ 32–30ರಿಂದ ಮುನ್ನಡೆ ತನ್ನದಾಗಿಸಿಕೊಂಡಿತು. ನಂತರವೂ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ ಆಟದ ರೋಚಕತೆ ಹೆಚ್ಚಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.