ಬೆಂಗಳೂರು: ನಾಯಕ ಪವನ್ ಕುಮಾರ್ ಶೆರಾವತ್ ಅವರ ಛಲದ ಆಟದಿಂದಾಗಿ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಮತ್ತೆ ಜಯದ ಹಾದಿಗೆ ಮರಳಿತು.
ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್ ತಂಡವು 36–31ರಿಂದ ತೆಲುಗು ಟೈಟನ್ಸ್ ವಿರುದ್ಧ ಜಯಿಸಿತು.
ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಬುಲ್ಸ್ ತಂಡಕ್ಕೆ ಪವನ್ ಗೆಲುವಿನ ಹಾದಿ ತೋರಿಸಿದರು. ರೇಡಿಂಗ್‌ನಲ್ಲಿ 12 ಅಂಕಗಳನ್ನು ಗಳಿಸಿದ ಅವರು ಜಯದ ರೂವಾರಿಯಾದರು.
ಭರತ್ (7) ಕೂಡ ಅವರಿಗೆ ಉತ್ತಮ ಜೊತೆ ನೀಡಿದರು. ರಕ್ಷಣಾ ವಿಭಾಗದಲ್ಲಿ ಸೌರಭ್ ನಂದಾಲ್ ಮತ್ತು ಅಮನ್ ತಲಾ ನಾಲ್ಕು ಅಂಕ ಗಳಿಸಿದರು.
ಟೈಟನ್ಸ್ ತಂಡದ ಅಂಕಿತ್ ಬೆನಿವಾಲ್ (7), ರಾಕೇಶ್ ಗೌಡ (5) ಮತ್ತು ಆಕಾಶ್ ಚೌಧರಿ (5) ಅವರು ಉತ್ತಮವಾಗಿ ಆಡಿದರು. ಆದರೆ, ಅವರ ಪ್ರಯತ್ನಕ್ಕೆ ಗೆಲುವಿನ ಫಲ ಒಲಿಯಲಿಲ್ಲ.
ಹರಿಯಾಣಕ್ಕೆ ರೋಚಕ ಜಯ: ರೇಡಿಂಗ್ ಪಡೆಯ ಅಮೋಘ ಆಟದ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವು ಕೇವಲ ಒಂದು ಅಂಕದ ಅಂತರದಿಂದ ಯುಪಿ ಯೋಧಾ ಎದುರು ಜಯಭೇರಿ ಬಾರಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ತಂಡವು 36–35ರಿಂದ ಗೆದ್ದಿತು. ಹರಿಯಾಣದ ರೋಹಿತ್ ಗುಲಿಯಾ ಏಳು, ವಿಶಾಶ್ ಖಂಡೊಲಾ, ಜೈದೀಪ್, ವಿನಯ್ ಮತ್ತು ಮೋಹಿತ್ ಅವರು ತಲಾ ಐದು ಪಾಯಿಂಟ್ಸ್ ಗಳಿಸಿದರು. ಇದರೊಂದಿಗೆ ತಂಡದ ಜಯಕ್ಕೆ ಮಹತ್ವದ ಕಾಣಿಕೆ ನೀಡಿದರು.
ಯೋಧಾ ತಂಡದ ಆಟಗಾರರೂ ಕಠಿಣ ಪೈಪೋಟಿಯೊಡ್ಡಿದರು. ಶ್ರೀಕಾಂತ್ ಜಾಧವ್ 10 ಅಂಕಗಳನ್ನು ಗಳಿಸುವ ಮೂಲಕ ತಂಡವನ್ನು ಜಯದ ಸನಿಹ ತಂದಿದ್ದರು. ಅವರಿಗೆ ಪ್ರದೀಪ್ ನರ್ವಾಲ್ ಮತ್ತು ಮೊಹಮ್ಮದ್ ತಘಿ ಕ್ರಮವಾಗಿ ಆರು ಹಾಗೂ ಐದು ಅಂಕ ಗಳಿಸಿ ಉತ್ತಮ ಜೊತೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.