ADVERTISEMENT

Pro Kabaddi 10: ಪುಣೇರಿ ಪಲ್ಟನ್‌ಗೆ ಮಣಿದ ಪ್ಯಾಂಥರ್ಸ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 19:23 IST
Last Updated 4 ಡಿಸೆಂಬರ್ 2023, 19:23 IST
ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡ ಮತ್ತು ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡಗಳ ನಡುವೆ ಪೈಪೋಟಿ
ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡ ಮತ್ತು ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡಗಳ ನಡುವೆ ಪೈಪೋಟಿ   

ಅಹಮದಾಬಾದ್‌: ಅಸ್ಲಾಂ ಇನಾಮದಾರ್‌ ಮತ್ತು ಮೋಹಿತ್ ಗೋಯತ್ ಅವರ ಅಮೋಘ ಆಟದ ಬಲದಿಂದ ಪುಣೇರಿ ಪಲ್ಟನ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 37–33ರಿಂದ ಹಾಲಿ ಚಾಂಪಿಯನ್‌ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿತು.

ಟ್ರಾನ್ಸ್‌ ಸ್ಟೇಡಿಯಾದಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆಗೆ 14–18ರಿಂದ ಹಿಂದೆಯಿದ್ದ ಪಲ್ಟನ್‌ ತಂಡವು ಉತ್ತರಾರ್ಧದಲ್ಲಿ ಪುಟಿದೆದ್ದು ಮೇಲುಗೈ ಸಾಧಿಸಿತು.

ಪಲ್ಟನ್‌ ತಂಡವು ರೇಡ್‌ನಿಂದ 19, ಟ್ಯಾಕಲ್‌ನಿಂದ 14 ಮತ್ತು ಆಲೌಟ್‌ನಿಂದ 4 ಅಂಕಗಳನ್ನು ಸಂಪಾದಿಸಿದರೆ, ಎದುರಾಳಿ ತಂಡವು ರೇಡ್‌ನಿಂದ 24, ಟ್ಯಾಕಲ್‌ನಿಂದ 4 ಮತ್ತು ಆಲೌಟ್‌ನಿಂದ 2 ಪಾಯಿಂಟ್ಸ್‌ ಗಳಿಸಿತು.

ADVERTISEMENT

ಅಸ್ಲಾಂ ಅವರು 10 ಅಂಕಗಳನ್ನು ಪಲ್ಟನ್‌ ತಂಡಕ್ಕೆ ತಂದುಕೊಟ್ಟರೆ, ಮೋಹಿತ್‌ 8 ಪಾಯಿಂಟ್ಸ್‌ ಸಂಪಾದಿಸಿದರು. ಇದೇ ತಂಡದ ಮೊಹಮ್ಮದ್ ರೇಜಾ ಶಾಡ್ಲೊಯಿ ಟ್ಯಾಕಲ್‌ನಿಂದ 4 ಅಂಕ ಪಡೆದು ಮಿಂಚಿದರು.

ಪ್ಯಾಂಥರ್ಸ್‌ ತಂಡದಲ್ಲಿ ಅರ್ಜುನ್ ದೇಶ್ವಾಲ್ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರು ತಂಡಕ್ಕೆ 10 ಬೋನಸ್‌ ಸೇರಿದಂತೆ ಒಟ್ಟು 17 ಪಾಯಿಂಟ್ಸ್‌ಗಳನ್ನು ತಂದುಕೊಟ್ಟರು.

ಬುಲ್ಸ್‌ಗೆ ಮತ್ತೆ ಸೋಲು: ಮೊದಲ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ 34–31ರಿಂದ ಸೋತಿದ್ದ ಬೆಂಗಳೂರು ಬುಲ್ಸ್‌ ತನ್ನ ಎರಡನೇ ಪಂದ್ಯದಲ್ಲೂ ಮುಗ್ಗರಿಸಿತು.

ಬೆಂಗಾಲ್ ವಾರಿಯರ್ಸ್‌ ವಿರುದ್ಧ 32–30ರಿಂದ ಪರಾಭವಗೊಂಡಿತು. ಆರಂಭದಲ್ಲಿ ಸಮಬಲದ ಹೋರಾಟ ಕಂಡುಬಂದರೂ ಮಧ್ಯಂತರದ ವೇಳೆ 11-14ರಿಂದ ಬುಲ್ಸ್‌ ಹಿನ್ನಡೆಯಲ್ಲಿತ್ತು. ಉತ್ತರಾರ್ಧದಲ್ಲಿ ಮತ್ತೆ ಪುಟದೆದ್ದ ಬುಲ್ಸ್ ತಂಡ ಮತ್ತೆ ಹೋರಾಟ ನಡೆಸಿತು. ಅಂತಿಮವಾಗಿ ಎರಡು ಅಂಕಗಳಿಂದ ವಾರಿಯರ್ಸ್‌ ತಂಡ ಗೆಲುವು ಸಾಧಿಸಿತು.

ಮಣಿಂದರ್ ಸಿಂಗ್ ಬೆಂಗಾಲ್‌ ತಂಡಕ್ಕೆ 11 ಪಾಯಿಂಟ್‌ ತಂದುಕೊಟ್ಟರು. ಬುಲ್ಸ್‌ ತಂಡದ ಪರ ಭರತ್‌ 6, ನೀರಜ್‌ ನರ್ವಾಲ್‌ 5 ಅಂಕ ಸಂಪಾದಿಸಿದರು.

ಇಂದಿನ ಪಂದ್ಯ

ಗುಜರಾತ್‌ ಜೈಂಟ್ಸ್‌–ಯು ಮುಂಬಾ (ರಾತ್ರಿ 8)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.