ADVERTISEMENT

ಗೆದ್ದವರು, ಹೊರಬಿದ್ದವರು

ಜಿ.ಶಿವಕುಮಾರ
Published 30 ಡಿಸೆಂಬರ್ 2018, 19:45 IST
Last Updated 30 ಡಿಸೆಂಬರ್ 2018, 19:45 IST
ಪಟ್ನಾ ಪೈರೇಟ್ಸ್‌ ಎದುರಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡದ ರೋಹಿತ್‌ ಕುಮಾರ್‌ (ಕೆಂ‍ಪು ಪೋಷಾಕು) ರೇಡ್‌ ಮಾಡಿದ ರೀತಿ
ಪಟ್ನಾ ಪೈರೇಟ್ಸ್‌ ಎದುರಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡದ ರೋಹಿತ್‌ ಕುಮಾರ್‌ (ಕೆಂ‍ಪು ಪೋಷಾಕು) ರೇಡ್‌ ಮಾಡಿದ ರೀತಿ   

ಕೆಲ ದಿನಗಳ ಹಿಂದಿನ ಮಾತು. ಸಂಜೆ ಕಚೇರಿಗೆ ಬರುವಾಗ ಬೆಂಗಳೂರಿನ ಶ್ರೀನಿವಾಸನಗರದ 10ನೇ ಮುಖ್ಯರಸ್ತೆಯಲ್ಲಿ ಐದು ಮಂದಿ ಯುವಕರು ಕಬಡ್ಡಿ ಆಡುವುದರಲ್ಲಿ ತಲ್ಲೀನರಾಗಿದ್ದರು. ದ್ವಿಚಕ್ರ ವಾಹನಗಳು ಮತ್ತು ಪಾದಚಾರಿಗಳು ಅದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಅದ್ಯಾವುದರ ಪರಿವೆಯೂ ಇಲ್ಲದೆ ಅವರು ಆಟ ಮುಂದುವರಿಸಿದ್ದರು. ಅಲ್ಲೇ ಕುಳಿತಿದ್ದ ಬಾಲಕನೊಬ್ಬ ‘ಲೇ ಪಂಗಾ,
ಲೇ ಪಂಗಾ’ ಎಂದು ಕೂಗುತ್ತಿದ್ದ. ‘ಏ ಸುಮ್ಮನಿರೊ’ ಎಂದು ಆ ಯುವಕರು ಗದರಿದರೂ ಆತ ಕೂಗುವುದನ್ನು ಮುಂದುವರಿಸುತ್ತಲೇ ಇದ್ದ.

ಪ್ರೊ ಕಬಡ್ಡಿ ಲೀಗ್‌, ಯುವಕರು ಮತ್ತು ಮಕ್ಕಳನ್ನು ಎಷ್ಟು ಪ್ರಭಾವಿಸಿದೆ ಎಂಬುದಕ್ಕೆ ಇದೊಂದು ನಿದರ್ಶನ. ದೇಶದ ಉದ್ದಗಲಕ್ಕೆ ಸಂಚರಿಸಿದರೆ ಇಂತಹ ಸಾಕಷ್ಟು ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಹಳ್ಳಿ, ನಗರ ಹೀಗೆ ಎಲ್ಲೆಡೆಯೂ ಕಬಡ್ಡಿ ಆಡುವವರ ಸಂಖ್ಯೆ ಹೆಚ್ಚುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಶುರುವಾದ ಈ ಲೀಗ್‌ ಈಗ ಎಲ್ಲರ ಮನೆ ಮಾತಾಗಿದೆ. ಪಂದ್ಯದ ದಿನ ಕ್ರೀಡಾಂಗಣಗಳು ಅಭಿಮಾನಿಗಳಿಂದ ತುಂಬಿ ಹೋಗಿರುತ್ತವೆ. ಟಿ.ವಿ.ಯಲ್ಲಿ ಪಂದ್ಯಗಳನ್ನು ಕಣ್ತುಂಬಿಕೊಳ್ಳುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಲೀಗ್‌ನ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

ADVERTISEMENT

ಐಪಿಎಲ್‌ನಿಂದ ಪ್ರೇರಣೆ
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಯಶಸ್ಸಿನಿಂದ ಪ್ರೇರಣೆ ಪಡೆದು ಮಷಾಲ್ ಸ್ಪೋರ್ಟ್ಸ್‌ ಸಂಸ್ಥೆ 2014ರಲ್ಲಿ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರಂಭಿಸಿತು. ಮೊದಲ ಆವೃತ್ತಿಯಲ್ಲೇ ಲೀಗ್‌ ಜನಪ್ರಿಯವಾಗಿತ್ತು. ದಾಖಲೆಯ 43 ಕೋಟಿ ಮಂದಿ ಟಿ.ವಿ.ಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದು ಇದಕ್ಕೆ ಸಾಕ್ಷಿ. ಎರಡನೇ ಆವೃತ್ತಿಗೂ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿತು. ಇದರಿಂದ ಪ್ರೇರಿತವಾದ ಮಷಾಲ್‌ ಸ್ಪೋರ್ಟ್ಸ್‌ ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ಸಂಸ್ಥೆಗಳು 2016ರಲ್ಲಿ ಒಂದೇ ವರ್ಷದಲ್ಲಿ ಎರಡು ಬಾರಿ ಲೀಗ್‌ ನಡೆಸಲು ನಿರ್ಧರಿಸಿದವು. ಜನವರಿ ಮತ್ತು ಫೆಬ್ರುವರಿ ಹಾಗೂ ಜೂನ್‌ ಮತ್ತು ಜುಲೈನಲ್ಲಿ ನಡೆದ ಲೀಗ್‌ಗಳಿಗೂ ಅಪಾರ ಜನಮನ್ನಣೆ ಲಭಿಸಿತು.

ಲೀಗ್‌ನ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸುವ ಉದ್ದೇಶದಿಂದ ಮಷಾಲ್‌ ಸ್ಪೋರ್ಟ್ಸ್‌ 2017ರಲ್ಲಿ ಒಟ್ಟು ತಂಡಗಳ ಸಂಖ್ಯೆಯನ್ನು ಎಂಟರಿಂದ 12ಕ್ಕೆ ಹೆಚ್ಚಿಸಿತು. ಜೊತೆಗೆ ಹೊಸದಾಗಿ ಆಟಗಾರರ ಹರಾಜು ನಡೆಸಿತು. ದೇಶ ವಿದೇಶದ 400 ಮಂದಿ ಆಟಗಾರರು ಹರಾಜು ಪಟ್ಟಿಯಲ್ಲಿ ಸ್ಥಾನ ಗಳಿಸಿದರು. ಇವರ ಪೈಕಿ ತಮಗೆ ಬೇಕಾದವರನ್ನು ಸೆಳೆದುಕೊಳ್ಳಲು ಫ್ರಾಂಚೈಸ್‌ಗಳು ಒಟ್ಟು ₹ 46.99 ಕೋಟಿ ವಿನಿಯೋಗಿಸಿದವು.

11 ರಾಜ್ಯಗಳಲ್ಲಿ 13 ವಾರಗಳ ಕಾಲ ಒಟ್ಟು 138 ಪಂದ್ಯಗಳು ನಡೆದವು. ಹೀಗಿದ್ದರೂ ಅಭಿಮಾನಿಗಳ ಉತ್ಸಾಹ ಕುಗ್ಗಲಿಲ್ಲ. ಈ ಬಾರಿಯ ಲೀಗ್‌ (ಆರನೇ ಆವೃತ್ತಿ) ಕೂಡಾ ಇದೇ ಹಾದಿಯಲ್ಲಿ ಸಾಗಿದೆ. ಲೀಗ್‌ ಹಂತದ ಪಂದ್ಯಗಳು ಮುಗಿದಿವೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೆಂಬ ಹಣೆಪಟ್ಟಿ ಹೊಂದಿದ್ದವರು ಮುಗ್ಗರಿಸಿದ್ದಾರೆ. ಕೆಲ ತಂಡಗಳು ‘ಪ್ಲೇ ಆಫ್‌’ಗೆ ಅರ್ಹತೆ ಗಳಿಸಿ ಅಚ್ಚರಿ ಮೂಡಿಸಿವೆ.

ಬೆಂಗಳೂರು ಬುಲ್ಸ್‌
ರೋಹಿತ್‌ ಕುಮಾರ್‌ ಸಾರಥ್ಯದ ಬೆಂಗಳೂರು ಬುಲ್ಸ್‌ ತಂಡ ಈ ಬಾರಿ ‘ಪ್ಲೇ ಆಫ್’ ಪ್ರವೇಶಿಸಿ ಎಲ್ಲರ ಗಮನ ಸೆಳೆದಿದೆ.

‘ಬಿ’ ವಲಯದಲ್ಲಿ ಸ್ಥಾನ ಗಳಿಸಿದ್ದ ಈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಅಚ್ಚರಿ ಮೂಡಿಸಿದೆ.

22 ಪಂದ್ಯಗಳನ್ನು ಆಡಿದ ರೋಹಿತ್ ಬಳಗ 13ರಲ್ಲಿ ಗೆದ್ದು ಏಳರಲ್ಲಿ ಸೋತಿದೆ. ಎರಡು ಪಂದ್ಯಗಳು ‘ಟೈ’ ಆಗಿವೆ. ಕೋಚ್‌ ರಣಧೀರ್‌ ಸಿಂಗ್‌ ಮತ್ತು ಸಹಾಯಕ ಕೋಚ್‌ ಕರ್ನಾಟಕದ ಬಿ.ಸಿ.ರಮೇಶ್‌ ಅವರ ತಂತ್ರಗಾರಿಕೆ ಈ ಬಾರಿ ಕೆಲಸ ಮಾಡಿದೆ. ಪವನ್‌ ಶೆರಾವತ್‌, ರೋಹಿತ್‌ ಕುಮಾರ್‌ ಮತ್ತು ಕಾಶಿಲಿಂಗ್‌ ಅಡಕೆ ಅವರ ಆಟ ಅಭಿಮಾನಿಗಳ ಮನ ಗೆದ್ದಿದೆ.

ಬುಲ್ಸ್‌ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಎದುರು ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ನೇರವಾಗಿ ಫೈನಲ್‌ಗೆ ಅರ್ಹತೆ ಗಳಿಸಲಿದೆ.

ಗುಜರಾತ್‌ ಫಾರ್ಚೂನ್‌ಜೈಂಟ್ಸ್‌
ಸುನಿಲ್‌ ಕುಮಾರ್‌ ಸಾರಥ್ಯದ ಗುಜರಾತ್‌ ಕೂಡಾ ‘ಪ್ಲೇ ಆಫ್’ ಪ್ರವೇಶಿಸಿ ಬೆರಗು ಮೂಡಿಸಿದೆ. ಈ ತಂಡ ತಾನಾಡಿದ 22 ಪಂದ್ಯಗಳ ಪೈಕಿ 17ರಲ್ಲಿ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹಿರಿಯ ಆಟಗಾರ ಮನಪ್ರೀತ್‌ ಸಿಂಗ್ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಗುಜರಾತ್‌, ಆಟದ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಈ ಬಾರಿ ಸುನಿಲ್‌ ಬಳಗದಿಂದ ಮೂಡಿಬಂದಿರುವ ಸಾಮರ್ಥ್ಯ ಇದನ್ನು ನಿರೂಪಿಸುವಂತಿದೆ.

ಯು ಮುಂಬಾ
2015ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಯು ಮುಂಬಾ ತಂಡ ಈ ಬಾರಿಯೂ ಪ್ರಶಸ್ತಿಯೆಡೆಗೆ ದಾಪುಗಾಲಿಟ್ಟಿದೆ.

ಫಜಲ್‌ ಅತ್ರಾಚಲಿ ಮುಂದಾಳತ್ವದ ಈ ತಂಡ ಈ ಬಾರಿ ‘ಎ’ ವಲಯದಲ್ಲಿ ಆಡಿತ್ತು. 22 ಪಂದ್ಯಗಳ ಪೈಕಿ 15ರಲ್ಲಿ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ‘ಪ್ಲೇ ಆಫ್‌’ ಪ್ರವೇಶಿಸಿದೆ.

ಯು.ಪಿ.ಯೋಧಾ
ಕನ್ನಡಿಗ ರಿಷಾಂಕ್‌ ದೇವಾಡಿಗ ಸಾರಥ್ಯದ ಯು.ಪಿ.ಯೋಧಾ ಕೂಡಾ ಈ ಬಾರಿ ಅಮೋಘ ಆಟದ ಮೂಲಕ ಅಭಿಮಾನಿಗಳನ್ನು ಮುದಗೊಳಿಸಿದೆ.

‘ಬಿ’ ವಲಯದಲ್ಲಿ ಸ್ಥಾನ ಪಡೆದಿದ್ದ ಈ ತಂಡ ಆರಂಭದ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು ಭರವಸೆ ಮೂಡಿಸಿತ್ತು. ಆದರೆ ನಂತರ ಸತತ ಐದು ಹಣಾಹಣಿಗಳಲ್ಲಿ ಸೋತಿದ್ದರಿಂದ ‘ಪ್ಲೇ ಆಫ್‌’ ಹಾದಿ ದುರ್ಗಮ ಎನಿಸಿತ್ತು. ಫೀನಿಕ್ಸ್‌ನಂತೆ ಎದ್ದುಬಂದ ರಿಷಾಂಕ್‌ ಪಡೆ, ಕೊನೆಯ ಏಳು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವಿನ ತೋರಣ ಕಟ್ಟಿ ‘ಪ್ಲೇ ಆಫ್‌’ಗೆ ಲಗ್ಗೆ ಇಟ್ಟಿತು.

ದಬಂಗ್‌ ಡೆಲ್ಲಿ
6,7,8...ಪ್ರೊ ಕಬಡ್ಡಿ ಲೀಗ್‌ನ ಮೊದಲ ಮೂರು ಆವೃತ್ತಿಗಳಲ್ಲಿ ದಬಂಗ್ ಡೆಲ್ಲಿ ತಂಡ ಹೊಂದಿದ್ದ ಸ್ಥಾನಗಳಿವು. ನಾಲ್ಕು ಮತ್ತು ಐದನೇ ಆವೃತ್ತಿಗಳಲ್ಲೂ ಕಳಪೆ ಸಾಮರ್ಥ್ಯ ತೋರಿ ಟೀಕೆಗೆ ಗುರಿಯಾಗಿದ್ದ ಈ ತಂಡ ಈ ಬಾರಿ ‘ಪ್ಲೇ ಆಫ್‌’ಗೆ ಲಗ್ಗೆ ಇಟ್ಟಿರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು.

ಜೋಗಿಂದರ್‌ ಸಿಂಗ್‌ ನರ್ವಾಲ್‌ ಅವರ ಸಾರಥ್ಯದ ತಂಡ ಈ ಬಾರಿ ಸಂಘಟಿತ ಸಾಮರ್ಥ್ಯದ ಮೂಲಕ ಬಲಿಷ್ಠ ತಂಡಗಳ ಹೆಡೆಮುರಿ ಕಟ್ಟಿ ಗಮನ ಸೆಳೆದಿದೆ.

ಬೆಂಗಾಲ್‌ ವಾರಿಯರ್ಸ್‌
ಮೊದಲ ಮೂರು ಆವೃತ್ತಿಗಳಲ್ಲಿ ನಿರಾಸೆ ಮೂಡಿಸಿದ್ದ ಬೆಂಗಾಲ್‌ ವಾರಿಯರ್ಸ್‌ ಈ ಬಾರಿ ಚೇತೋಹಾರಿ ಆಟ ಆಡಿ ‘ಪ್ಲೇ ಆಫ್‌’ ಹಂತಕ್ಕೇರಿದೆ.

ನಾಯಕ ಸುರ್ಜಿತ್‌ ಸಿಂಗ್‌, ಜಾಂಗ್‌ ಕುನ್‌ ಲೀ, ಮಣಿಂದರ್‌ ಸಿಂಗ್‌ ಮತ್ತು ವಿಠಲ್‌ ಮೇಟಿ ಅವರು ಅಮೋಘ ಆಟ ಆಡಿ ತಂಡದ ಚೊಚ್ಚಲ ಪ್ರಶಸ್ತಿಯ ಕನಸಿಗೆ ಬಲ ತುಂಬಿದ್ದಾರೆ. ಈ ಬಾರಿ ‘ಬಿ’ ಗುಂಪಿನಲ್ಲಿ ಆಡಿದ್ದ ಈ ತಂಡ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು ತಂಡದ ಮಟ್ಟಿಗೆ ದೊಡ್ಡ ಸಾಧನೆ.

ಪಟ್ನಾ ಪೈರೇಟ್ಸ್‌
ಹಿಂದಿನ ಮೂರು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದು ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದ ಪಟ್ನಾ ತಂಡ ಈ ಬಾರಿ ಗುಂಪು ಹಂತದಲ್ಲೇ ಅಭಿಯಾನ ಮುಗಿಸಿದೆ.

ಆರಂಭದ ಎಂಟು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಗೆದ್ದಿದ್ದ ಈ ತಂಡ ನಂತರ ಸತತ ಐದು ಹಣಾಹಣಿಗಳಲ್ಲಿ ಜಯದ ಸಿಹಿ ಸವಿದು ಪುಟಿದೇಳುವ ಮುನ್ಸೂಚನೆ ನೀಡಿತ್ತು. ನಾಯಕ ಪ್ರದೀಪ್‌ ನರ್ವಾಲ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಈ ತಂಡಕ್ಕೆ ಮುಳುವಾಯಿತು.

ತೆಲುಗು ಟೈಟನ್ಸ್‌ ಮತ್ತು ತಮಿಳ್‌ ತಲೈವಾಸ್‌ ತಂಡಗಳೂ ‘ಪ್ಲೇ ಆಫ್‌’ ಪ್ರವೇಶಿಸಲು ವಿಫಲವಾದವು. ಈ ತಂಡಗಳು ‘ಬಿ’ ಗುಂಪಿನಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಗಳಿಸಿದವು.

‘ಎ’ ಗುಂಪಿನಲ್ಲಿದ್ದ ಪುಣೇರಿ ಪಲ್ಟನ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ತಂಡಗಳೂ ಗುಂಪು ಹಂತದಲ್ಲೇ ಪಲ್ಟಿ ಹೊಡೆದವು.

ಕುಬೇರರಾದ ಆಟಗಾರರು
ಪ್ರೊ ಕಬಡ್ಡಿ ಲೀಗ್‌ ಶುರುವಾದ ನಂತರ ಆಟಗಾರರ ಬದುಕು ಬದಲಾಗಿದೆ. ಅವರಿಗೆ ತಾರಾ ವರ್ಚಸ್ಸು ಲಭಿಸಿದೆ. ಹೊದಲೆಲ್ಲಾ ಜನ ಗುರುತಿಸುತ್ತಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮತ್ತು ಆಟಗಾರರ ಹಸ್ತಾಕ್ಷರ ಪಡೆಯಲು ಅಭಿಮಾನಿಗಳು ಮುಗಿಬೀಳುವುದು ಸಾಮಾನ್ಯವಾಗಿದೆ.

ಲೀಗ್‌ನಿಂದ ಆಟಗಾರರು ಕುಬೇರರಾಗಿದ್ದಾರೆ. ಈ ಸಲದ ಹರಾಜಿನಲ್ಲಿ ಮೋನು ಗೋಯತ್‌ ಅವರನ್ನು ಹರಿಯಾಣ ಸ್ಟೀಲರ್ಸ್‌ ತಂಡ ₹1.51 ಕೋಟಿ ನೀಡಿ ಸೆಳೆದುಕೊಂಡಿದ್ದು ಇದಕ್ಕೆ ಸಾಕ್ಷಿ. ಇರಾನ್‌ನ ಫಜಲ್‌ ಅತ್ರಾಚಲಿ ಲೀಗ್‌ನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ವಿದೇಶಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಅವರನ್ನು ಯು ಮುಂಬಾ ತಂಡ ₹1 ಕೋಟಿ ನೀಡಿ ಖರೀದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.