ಮುಂಬೈ: ರೋಹಿತ್ ಗುಲಿಯಾ ಆಲ್‌ರೌಂಡ್ ಆಟ ಮತ್ತು ಜಿ.ಬಿ.ಮೋರೆ ಅವರ ಆಕರ್ಷಕ ರೈಡಿಂಗ್ ನೆರವಿನಿಂದ ಪ್ರಬಲ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಗುರುವಾರ ನಡೆದ ಏಳನೇ ವಿವೊ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 31–26 ರಲ್ಲಿ ಐದು ಪಾಯಿಂಟ್‌ಗಳಿಂದ ದಬಂಗ್ ಡೆಲ್ಲಿ ತಂಡವನ್ನು ಸೋಲಿಸಿತು. ಗುಜರಾತ್ ತಂಡ ಈ ಗೆಲುವಿನೊಡನೆ ಅಜೇಯ ಸಾಧನೆ ಮುಂದುವರಿಸಿದೆ.
ದಬಂಗ್ ಡೆಲ್ಲಿ ತಂಡಕ್ಕೆ ಇಂದಿನದು ಲೀಗ್‌ನ ಮೊದಲ ಸೋಲು ಎನಿಸಿತು. ಜಿ.ಬಿ.ಮೋರೆ ರೈಡಿಂಗ್‌ನಲ್ಲಿ ಐದು, ಟ್ಯಾಕ್ಲಿಂಗ್‌ನಲ್ಲಿ ನಾಲ್ಕು ಸೇರಿದಂತೆ 9 ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು. ಗುಲಿಯಾ ಅವರೂ ದಾಳಿಯಲ್ಲಿ ಮಿಂಚಿ ಎಂಟು ಪಾಯಿಂಟ್‌ಗಳನ್ನು ಗಳಿಸಿದರು.
ಡೆಲ್ಲಿ ತಂಡದ ರೈಡಿಂಗ್ ಶಕ್ತಿಯಾಗಿರುವ ನವೀನ್ ಕುಮಾರ್ 10 ಪಾಯಿಂಟ್ ಗಳಿಸಿದರು. ಈ ಬಾರಿಯ ಲೀಗ್‌ನ ನಾಲ್ಕು ಪಂದ್ಯಗಳಿಂದ ಈ ರೈಡರ್ 42 ಪಾಯಿಂಟ್ಸ್ ಸಂಗ್ರಹಿಸಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ವಿರಾಮದ ವೇಳೆ ಡೆಲ್ಲಿ ತಂಡ 14–11ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಉತ್ತರಾರ್ಧದಲ್ಲಿ ಗುಜರಾತ್ ತಂಡ ಅಮೋಘವಾಗಿ ಚೇತರಿಸಿಕೊಂಡಿತು.
ಶುಕ್ರವಾರದ ಪಂದ್ಯಗಳು: ತೆಲುಗು ಟೈಟನ್ಸ್– ಯು.ಪಿ.ಯೋಧಾ (ರಾತ್ರಿ 7.30), ಯು ಮುಂಬಾ– ಫಾರ್ಚೂನ್‌ಜೈಂಟ್ಸ್ (8.30).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.