ಬೆಂಗಳೂರು: ರೋಚಕ ಟ್ಯಾಕ್ಲಿಂಗ್ ಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಆತಿಥೇಯಬೆಂಗಳೂರು ಬುಲ್ಸ್ ಸೋಲಿಗೆ ಶರಣಾಯಿತು.ಗುಜರಾತ್ ಫಾರ್ಚೂನ್‌ಜೈಂಟ್ಸ್ ಎದುರಿನ ಪಂದ್ಯದಲ್ಲಿ 23–32ರಲ್ಲಿ ಸೋತ ಬುಲ್ಸ್‌ಪ್ರೊ ಕಬಡ್ಡಿ ಲೀಗ್‌ನ ಬೆಂಗಳೂರು ಲೆಗ್‌ನ ಉದ್ಘಾಟನಾ ಪಂದ್ಯದಲ್ಲೇ ಮುಗ್ಗರಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಉಭಯ ತಂಡಗಳ ಡಿಫೆಂಡರ್‌ಗಳು ಮಿಂಚಿದರು. ಎರಡೂ ತಂಡಗಳು ತಲಾ 13 ಟ್ಯಾಕ್ಲಿಂಗ್ ಪಾಯಿಂಟ್‌ಗಳನ್ನು ಕಲೆ ಹಾಕಿದವು. ಆದರೆ ರೈಡಿಂಗ್‌ನಲ್ಲಿ 11 ಪಾಯಿಂಟ್ ಗಳಿಸಿ ಕೇವಲ 9 ಪಾಯಿಂಟ್ ಬಿಟ್ಟುಕೊಟ್ಟ ಗುಜರಾತ್ ಈ ಆವೃತ್ತಿಯಲ್ಲಿ ಸತತ ಎರಡನೇ ಬಾರಿ ಬುಲ್ಸ್ ವಿರುದ್ಧ ಗೆಲುವು ಸಾಧಿಸಿತು.
ಪಂದ್ಯದಲ್ಲಿ ಬುಲ್ಸ್ ಪರ ಮೊದಲ ರೈಡಿಂಗ್‌ಗೆ ನಾಯಕ ರೋಹಿತ್ ಕುಮಾರ್ ಸಜ್ಜಾಗುತ್ತಿದ್ದಂತೆ ಪ್ರೇಕ್ಷಕರ ಅಬ್ಬರ ಮೆಕ್ಸಿಕನ್ ಅಲೆಯಾಯಿತು. ತಂಡದ ಮುಂದಿನ ರೈಡ್ ಮಾಡಿದವರು ಪವನ್ ಶೆರಾವತ್. ಅವರನ್ನೂ ಪ್ರೇಕ್ಷಕರು ಶಿಳ್ಳೆ–ಕೇಕೆಗಳಿಂದ ಪ್ರೋತ್ಸಾಹಿಸಿದರು. ಎರಡನೇ ನಿಮಿಷದಲ್ಲಿ 2–4ರ ಹಿನ್ನಡೆಗೆ ಒಳಗಾಗಿದ್ದ ಗುಜರಾತ್ 3ನೇ ನಿಮಿಷದಲ್ಲಿ 4–4ರ ಸಮಬಲ ಸಾಧಿಸಿತು. ನಂತರ ಬುಲ್ಸ್‌ನ ರೋಹಿತ್ ಕುಮಾರ್ ಮತ್ತು ಲೀಗ್‌ನಲ್ಲಿ 50ನೇ ಪಂದ್ಯ ಆಡಿದ ಗುಜರಾತ್‌ನ ರೋಹಿತ್ ಗುಲಿಯಾ ಮಿಂಚಿದರು.
ಇವರಬ್ಬರ ಏಟು–ತಿರುಗೇಟಿನಿಂದ ಪಂದ್ಯ 5–5, 6–6, 9–9ರಲ್ಲಿ ಸಮ ಆಯಿತು. 13ನೇ ನಿಮಿಷದಲ್ಲಿ ಆತಿಥೇಯರನ್ನು ಆಲ್ ಔಟ್ ಮಾಡಿದ ಗುಜರಾತ್ 14–10ರ ಮುನ್ನಡೆ ಸಾಧಿಸಿತು. ಮೊದಲಾರ್ಧದ ಕೊನೆಯ ನಿಮಿಷದಲ್ಲಿ ರೋಹಿತ್ ಗುಲಿಯಾ ಅವರನ್ನು ಹಿಡಿದು ಸೌರಭ್ ನಂದಾಲ್ ‘ಹೈ ಫೈವ್’ ಸಾಧನೆ ಮಾಡಿದರೂ ಬುಲ್ಸ್ 12–18ರ ಹಿನ್ನಡೆಯೊಂದಿಗೆ ನಿರಾಸೆಗೊಂಡಿತು.
ಪ್ರತಿ ತಂತ್ರ ಹೆಣೆಯಲು ಬುಲ್ಸ್ ವಿಫಲ:ದ್ವಿತೀಯಾರ್ಧದ 4 ನಿಮಿಷಗಳ ಅಂತರದಲ್ಲಿ ಮಹೇಂದರ್ ಸಿಂಗ್ ಮತ್ತುಸೌರಭ್ ನಂದಾಲ್ ಕ್ರಮವಾಗಿ ರೋಹಿತ್ ಗುಲಿಯಾ ಮತ್ತು ಸಚಿನ್ ಅವರನ್ನು ಸೂಪರ್ ಟ್ಯಾಕಲ್‌ನಲ್ಲಿ ಕೆಡವಿ ಹಿನ್ನಡೆಯನ್ನು ಕುಗ್ಗಿಸಿದರು. ಕೊನೆಯ 7 ನಿಮಿಷಗಳಿದ್ದಾಗ ಬುಲ್ಸ್‌ನ ಹಿನ್ನಡೆ 20–23ಕ್ಕೆ ಇಳಿಯಿತು. ಕೊನೆಯ ಹಂತದಲ್ಲಿ ಪ್ರತಿತಂತ್ರಗಳನ್ನು ಹೂಡಲು ವಿಫಲವಾದ ಬುಲ್ಸ್ ಅಂತಿಮ ನಿಮಿಷದಲ್ಲಿ ಆಲ್ ಔಟ್ ಆಗಿ ಸೋಲನ್ನೂ ಒಪ್ಪಿಕೊಂಡಿತು.
ಮುಂಬಾಗೆ ಜಯ
ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ ಆಲ್‌ರೌಂಡ್ ಆಟವಾಡಿದ ಯು ಮುಂಬಾ ಶನಿವಾರದ ಎರಡನೇ ಪಂದ್ಯದಲ್ಲಿ 47–21ರ ಗೆಲುವು ಸಾಧಿಸಿತು. ರೈಡರ್ ಅಭಿಷೇಕ್ ಸಿಂಗ್ 13 ಪಾಯಿಂಟ್ ಗಳಿಸಿದರು. ಮೊದಲಾರ್ಧದಲ್ಲಿ 23–7ರ ಮುನ್ನಡೆ ಗಳಿಸಿದ್ದ ಮುಂಬಾ ನಂತರವೂ ಆಧಿಪತ್ಯ ಸ್ಥಾಪಿಸಿತು. ಒಟ್ಟು 4 ಬಾರಿ ಎದುರಾಳಿ ತಂಡವನ್ನು ಆಲ್ ಔಟ್ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.