ADVERTISEMENT

ಟೈ ಮಾಡಿಕೊಂಡ ಜೈಪುರ–ಗುಜರಾತ್‌

ಪ್ರೊ ಕಬಡ್ಡಿ: 100ನೇ ಪಂದ್ಯ 28–28 ಟೈ; ಮಿಂಚಿದ ರಕ್ಷಣಾ ವಿಭಾಗದ ಆಟಗಾರರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 20:56 IST
Last Updated 21 ಸೆಪ್ಟೆಂಬರ್ 2019, 20:56 IST
   

ಜೈಪುರ: ಅಮೋಘ ರಕ್ಷಣಾ ಕೌಶಲ ತೋರಿದ ಆತಿಥೇಯ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡಗಳು, ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ 100ನೇ ಪಂದ್ಯವನ್ನು 28–28 ರಲ್ಲಿ ಸಮ ಮಾಡಿಕೊಂಡವು.

ಪ್ರೇಕ್ಷಕರಿಂದ ಭರ್ತಿಯಾಗಿದ್ದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಶನಿವಾರ ತವರಿನಲ್ಲಿ ಹಾಲಿ ಆವೃತ್ತಿಯ ಮೊದಲ ಪಂದ್ಯ ಆಡಿದ ಪಿಂಕ್‌ ಪ್ಯಾಂಥರ್ಸ್‌ ಉತ್ತಮ ಆರಂಭ ಮಾಡಿತು.

ಅಲ್ಲದೇ ಪೂರ್ವಾರ್ಧದ ಬಹುಭಾಗ ಉತ್ತಮ ಲೀಡ್‌ನಲ್ಲೇ ಇದ್ದು, ವಿರಾಮಕ್ಕೆ ಹೋದಾಗ 15–10ರಲ್ಲಿ ಮುಂದಿತ್ತು. ಕೊನೆಗೆ ಪಾಯಿಂಟ್‌ ಹಂಚಿಕೊಳ್ಳುವುದಕ್ಕೆ ಸಮಾಧಾನಪಟ್ಟುಕೊಳ್ಳುವಂತಾಯಿತು.

ADVERTISEMENT

ಲೀಗ್‌ನಲ್ಲಿ ಮೊದಲ ಬಾರಿ ಎರಡೂ ತಂಡಗಳು ರಕ್ಷಣಾ ವಿಭಾಗದಿಂದಲೇ ಹೆಚ್ಚಿನ ಪಾಯಿಂಟ್ಸ್‌ ಪಡೆದವು. ವಿಶಾಲ್‌ ರಕ್ಷಣೆಯಲ್ಲಿ ಆರು ಜೊತೆಗೆ ಮೂರು ಬೋನಸ್‌ ಪಾಯಿಂಟ್ಸ್ ಸೇರಿ 9 ಪಾಯಿಂಟ್ಸ್ ಗಳಿಸಿದರು. ನಿತಿನ್‌ ರಾವಲ್‌ ಮತ್ತು ಸಂತಾಪನ್‌ಸೆಲ್ವಂ ತಲಾ ಮೂರು ಪಾಯಿಂಟ್ಸ್ ಗಳಿಸಿದರು. ದಾಳಿಯಲ್ಲಿ ದೀಪಕ್‌ ನಿವಾಸ್‌ ಹೂಡ ಐದು ಪಾಯಿಂಟ್ಸ್‌ ಗಳಿಸಿದರು.

ಗುಜರಾತ್‌ ಪರ ಟ್ಯಾಕ್ಲಿಂಗ್‌ನಲ್ಲಿ ಪರ್ವೇಶ್ ಬೇನ್ಸ್‌ವಾಲ್‌ ಐದು, ಜಿ.ಬಿ.ಮೋರೆ, ಪಂಕಜ್‌ ಮತ್ತು ಸುನೀಲ್‌ ಕುಮಾರ್‌ ತಲಾ ಮೂರು ಪಾಯಿಂಟ್ಸ್‌ ಗಳಿಸಿದರು. ರೇಡರ್‌ಗಳ ಪೈಕಿ ಸಚಿನ್‌ ಐದು ಅಂಕ ಸಂಗ್ರಹಿಸಿದರು.

ಎರಡೂ ತಂಡಗಳ ರೇಡರ್‌ಗಳು, ಎದುರಾಳಿಗಳ ರಕ್ಷಣಾ ಕೋಟೆ ಭೇದಿಸಲು ಪರದಾಡಿದರು. ಯಶಸ್ವಿ ಟ್ಯಾಕಲ್‌ಗಳ ಮೂಲಕ ರಕ್ಷಣಾ ಆಟಗಾರರು ಒತ್ತಡ ಹೇರಿದರು. ವಿಶಾಲ್‌ ತಂಡಕ್ಕೆ ಮರಳಿದ್ದರಿಂದ ಜೈಪುರ ಸ್ವಲ್ಪ ಮೇಲುಗೈ ಸಾಧಿಸಿದಂತೆ ಕಂಡಿತು. 13ನೇ ನಿಮಿಷ ಫಾರ್ಚೂನ್‌ಜೈಂಟ್ಸ್ ತಂಡವನ್ನು ಆಲೌಟ್‌ ಮಾಡಿದ ಪಿಂಕ್‌ ಪ್ಯಾಂಥರ್ಸ್‌ ಆರು ಪಾಯಿಂಟ್‌ಗಳ (12–6) ಮುನ್ನಡೆ ಪಡೆದಿತ್ತು. ರೇಡರ್‌ಗಳ ಪ‍ರದಾಟದ ನಡುವೆಯೂ ಸ್ವಲ್ಪ ಗಮನ ಸೆಳೆದವರು ಜೈಪುರ ನಾಯಕ ದೀಪಕ್‌ ನಿವಾಸ್‌ ಹೂಡ.

ಆದರೆ ದ್ವಿತೀಯಾರ್ಧದಲ್ಲಿ ವಿಶಾಲ್‌ ‘ಹೈ ಫೈ’ ಮೂಲಕ ಜೈಪುರಕ್ಕೆ ಉತ್ತಮ ಆರಂಭ ಕೊಟ್ಟರು. ಆದರೆ ಗುಜರಾತ್‌ ರಕ್ಷಣಾ ಕೋಟೆ ಬಲಗೊಳ್ಳತೊಡಗಿದಂತೆ ಜೈಪುರ ಹಿಡಿತ ಸಡಿಲವಾಯಿತು. ಗುಜರಾತ್‌ ಆರನೇ ನಿಮಿಷವೇ ‘ಆಲೌಟ್‌’ ಪಾಯಿಂಟ್‌ ಪಡೆದು ಹಿನ್ನಡೆಯನ್ನು ಎರಡು ಪಾಯಿಂಟ್ಸ್‌ಗೆ ಇಳಿಸಿತು. ನಂತರ ಎರಡೂ ತಂಡಗಳ ರಕ್ಷಣಾ ವಿಭಾಗದ ಕಡೆಗೇ ಹೆಚ್ಚು ಒತ್ತು ಕೊಟ್ಟವು. ಸಚಿನ್‌ ಯಶಸ್ವಿ ರೈಡ್‌ ಮತ್ತು ಪರ್ವೇಶ್ ಅವರ ಟ್ಯಾಕಲ್‌ನಿಂದ ನಾಲ್ಕು ನಿಮಿಷಗಳು ಉಳಿದಿರುವಂತೆ ಗುಜರಾತ್‌ ಮೂರು ಪಾಯಿಂಟ್‌ಗಳ ಮುನ್ನಡೆ ಪಡೆಯಿತು. ಆದರೆ ವಿಶಾಲ್‌ ಅವರ ಯಶಸ್ವಿ ಸೂಪರ್‌ ಟ್ಯಾಕಲ್‌ನಿಂದ ಮೂರು ನಿಮಿಷಗಳಿದ್ದಾಗ ಪಂದ್ಯ ಮತ್ತೆ ಸಮಗೊಂಡಿತು. ಪಂದ್ಯದಲ್ಲಿ ಕೊನೆಗೂ ಯಾರೊಬ್ಬರೂ ವಿಜಯಿಯಾಗಲಿಲ್ಲ.

ಮುಂದುವರಿದ ತಲೈವಾಸ್‌ ತಲೆನೋವು: ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾ ತಂಡ 42–22 ಪಾಯಿಂಟ್‌ಗಳಿಂದ ತಮಿಳು ತಲೈವಾಸ್‌ ತಂಡವನ್ನು ಸೋಲಿಸಿತು. ಯುಪಿ ಯೋಧಾ ಪರ ಶ್ರೀಕಾಂತ್‌ ಜಾಧವ್‌ ಮತ್ತು ಸುರೇಂದರ್‌ ಗಿಲ್‌ ಕ್ರಮವಾಗಿ ಎಂಟು ಮತ್ತು ಏಳು ಪಾಯಿಂಟ್‌ ತಂದುಕೊಟ್ಟರೆ, ರಕ್ಷಣೆಯಲ್ಲಿ ಸುಮಿತ್‌ ಐದು ಪಾಯಿಂಟ್‌ ಗಳಿಸಿದರು. ತಲೈವಾಸ್‌ ಪರ ಅನುಭವಿ ರಾಹುಲ್‌ ಚೌಧರಿ ಐದು ಪಾಯಿಂಟ್ಸ್ ಸಂಗ್ರಹಿಸಿದರು.

ಭಾನುವಾರದ ಪಂದ್ಯಗಳು
ಯು ಮುಂಬಾ– ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ (ರಾತ್ರಿ 7.30)
ಜೈಪುರ ಪಿಂಕ್‌ ಪ್ಯಾಂಥರ್ಸ್‌– ಬೆಂಗಾಲ್‌ ವಾರಿಯರ್ಸ್‌ (8.30)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.