ADVERTISEMENT

ಪ್ರೊ ಕಬಡ್ಡಿ ಲೀಗ್: ಪುಣೇರಿ ಎದುರು ಪಲ್ಟಿ ಹೊಡೆದ ಫಾರ್ಚೂನ್‌ಜೈಂಟ್ಸ್‌

ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗೆದ್ದ ಸುರ್ಜೀತ್‌ ಸಿಂಗ್‌ ಬಳಗ

ಜಿ.ಶಿವಕುಮಾರ
Published 14 ಸೆಪ್ಟೆಂಬರ್ 2019, 19:45 IST
Last Updated 14 ಸೆಪ್ಟೆಂಬರ್ 2019, 19:45 IST
ಪುಣೇರಿ ತಂಡದ ಆಟಗಾರ ಗುಜರಾತ್‌ ತಂಡದ ರೇಡರ್‌ ಅನ್ನು ಹಿಡಿಯಲು ಪ್ರಯತ್ನಿಸಿದ ಕ್ಷಣ 
ಪುಣೇರಿ ತಂಡದ ಆಟಗಾರ ಗುಜರಾತ್‌ ತಂಡದ ರೇಡರ್‌ ಅನ್ನು ಹಿಡಿಯಲು ಪ್ರಯತ್ನಿಸಿದ ಕ್ಷಣ    

ಪುಣೆ: ಇನ್ನೂ ಗಣೇಶೋತ್ಸವದ ಗುಂಗಿನಲ್ಲೇ ಇದ್ದ ಪೇಶ್ವೆಗಳ ನಾಡಿನ ಪ್ರೇಕ್ಷಕರಿಗೆ ಆತಿಥೇಯ ಪುಣೇರಿ ಪಲ್ಟನ್‌ ತಂಡ ಗೆಲುವಿನ ಸಿಹಿ ಉಣಬಡಿಸಿತು.

ಇಲ್ಲಿನ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಏಳನೇ ಆವೃತ್ತಿಯ 89ನೇ ಪಂದ್ಯದಲ್ಲಿ ಸುರ್ಜೀತ್‌ ಸಿಂಗ್‌ ಸಾರಥ್ಯದ ಪುಣೇರಿ 43–33 ಪಾಯಿಂಟ್ಸ್‌ನಿಂದ ಬಲಿಷ್ಠ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ಗೆ ಸೋಲಿನ ರುಚಿ ತೋರಿಸಿತು.

ಪುಣೇರಿ ತಂಡದ ‘ಸ್ಟಾರ್‌ ರೇಡರ್‌’ ನಿತಿನ್‌ ತೋಮರ್‌ ‘ಸೂಪರ್‌–10’ ಸಾಧನೆ ಮಾಡಿ ತವರಿನ ಅಭಿಮಾನಿಗಳ ಮನ ಗೆದ್ದರು. ಗಾಯದಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯ ಆಡಿದ ಅವರು 18 ರೇಡ್‌ಗಳನ್ನು ಮಾಡಿದರು. ಒಂಬತ್ತು ಟಚ್‌ ಹಾಗೂ ಎರಡು ಬೋನಸ್‌ ಪಾಯಿಂಟ್ಸ್‌ ಹೆಕ್ಕಿದರು. ಯುವ ರೇಡರ್‌ ಮಂಜೀತ್‌ ಏಳು ಪಾಯಿಂಟ್ಸ್‌ ಗಳಿಸಿದರು. ನಾಯಕ ಸುರ್ಜೀತ್‌ ಮತ್ತು ಬಾಳಸಾಹೇಬ್‌ ಜಾಧವ್‌ ‘ಹೈ –5’ ಸಾಧನೆ ಮಾಡಿ ಕಬಡ್ಡಿ ಪ್ರಿಯರ ಪ್ರೀತಿಗೆ ಪಾತ್ರರಾದರು. ಪಿಕೆಎಲ್‌ನಲ್ಲಿ 100ನೇ ಪಂದ್ಯ ಆಡಿದ ಗಿರೀಶ್‌ ಮಾರುತಿ ಎರ್ನಾಕ್‌ (3) ಕೂಡಾ ಗಮನ ಸೆಳೆದರು.

ADVERTISEMENT

ರೇಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿಯಾಗಿ ಆಡಿದ ಪುಣೇರಿ ತಂಡ ಮೊದಲಾರ್ಧದಲ್ಲಿ ಪೂರ್ಣ ಪ್ರಾಬಲ್ಯ ಸಾಧಿಸಿತು. ಈ ತಂಡ ಐದನೇ ನಿಮಿಷದ ವೇಳೆಗೆ 6–0 ಮುನ್ನಡೆ ಪಡೆಯಿತು. ಈ ಹಂತದಲ್ಲಿ ಗುಜರಾತ್‌, ಆಲ್‌ಔಟ್‌ ಭೀತಿ ಎದುರಿಸಿತ್ತು. ಆರನೇ ನಿಮಿಷದಲ್ಲಿ ಪಂಕಜ್‌ ಮೋಹಿತೆ ಅವರನ್ನು ಸೂಪರ್‌ ಟ್ಯಾಕಲ್‌ ಮಾಡಿದ ಲಲಿತ್‌ ಚೌಧರಿ ಫಾರ್ಚೂನ್‌ಜೈಂಟ್ಸ್‌ ತಂಡದ ಖಾತೆ ತೆರೆದರು. ತಂಡದ ಹಿನ್ನಡೆಯನ್ನು 2–6ಕ್ಕೆ ತಗ್ಗಿಸಿದರು. ಒಂಬತ್ತನೇ ನಿಮಿಷದಲ್ಲಿ ರೋಹಿತ್‌ ಗುಲಿಯಾ ಅವರನ್ನು ರಕ್ಷಣಾ ಬಲೆಯೊಳಗೆ ಕೆಡವಿದ ಪುಣೇರಿ, ಎದುರಾಳಿಗಳ ಆವರಣ ಖಾಲಿ ಮಾಡಿತು.ಆತಿಥೇಯರ ಮುನ್ನಡೆ 11–3ಕ್ಕೆ ಹೆಚ್ಚಿತು. ಬಳಿಕ ನಿತಿನ್‌ ಮತ್ತು ಮಂಜೀತ್‌, ಚುರುಕಿನ ರೇಡ್‌ಗಳ ಮೂಲಕ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆ ಏಳುವಂತೆ ಮಾಡಿದರು.

ವಿರಾಮದ ವೇಳೆಗೆ 24–10ರಿಂದ ಮುನ್ನಡೆ ಗಳಿಸಿದ್ದ ಆತಿಥೇಯರು ‌ದ್ವಿತೀಯಾರ್ಧದ ಶುರುವಿನಲ್ಲೇ ಎದುರಾಳಿಗಳನ್ನು ಮತ್ತೊಮ್ಮೆ ಆಲ್‌ಔಟ್‌ ಮಾಡಿದರು. ಗುಜರಾತ್‌ ತಂಡದ ಸಚಿನ್‌ ಅವರನ್ನು ಔಟ್‌ ಮಾಡಿದ ನಿತಿನ್‌, ಪುಣೇರಿ ತಂಡದ ಮುನ್ನಡೆಯನ್ನು 27–10ಕ್ಕೆ ಏರಿಸಿದರು. 31ನೇ ನಿಮಿಷದಲ್ಲಿ ಸುರ್ಜೀತ್‌ ಬಳಗ ಆಲ್‌ಔಟ್‌ ಆತಂಕ ಎದುರಿಸಿತ್ತು. ಈ ಹಂತದಲ್ಲೇ ಎರಡು ಸೂಪರ್‌ ಟ್ಯಾಕಲ್‌ಗಳನ್ನು ಮಾಡಿದ ಆತಿಥೇಯ ಆಟಗಾರರು ಮೈದಾನದಲ್ಲಿ ಮತ್ತೆ ಮಿಂಚು ಹರಿಯುವಂತೆ ಮಾಡಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಪಂದ್ಯ ಮುಗಿಯಲು ಏಳು ನಿಮಿಷಗಳು ಬಾಕಿ ಇದ್ದಾಗ ಸುರ್ಜೀತ್‌ ಪಡೆ 38–22ರಿಂದ ಮುಂದಿತ್ತು. ನಂತರವೂ ದಿಟ್ಟ ಆಟ ಆಡಿದ ಆತಿಥೇಯರು ಗೆಲುವಿನ ತೋರಣ ಕಟ್ಟಿದರು.

ಸಚಿನ್‌ ಸಾಧನೆ: ಗುಜರಾತ್ ತಂಡದ ಸಚಿನ್‌ ತನ್ವರ್‌ ಅವರು ಪಿಕೆಎಲ್‌ನಲ್ಲಿ ಒಟ್ಟು 350 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದರು. 25ನೇ ನಿಮಿಷದಲ್ಲಿ ಪುಣೇರಿ ತಂಡದ ನಿತಿನ್‌ ತೋಮರ್‌ ಅವರನ್ನು ಔಟ್‌ ಮಾಡುವ ಮೂಲಕ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಅವರಿಂದ ‘ಸೂಪರ್‌–10’ ಸಾಧನೆಯೂ ಅರಳಿತು.

ಇಂದಿನ ಪಂದ್ಯಗಳು
ದಬಂಗ್‌ ಡೆಲ್ಲಿ–ಗುಜರಾತ್‌ ಫಾರ್ಚೂನ್‌ಜೈಂಟ್ಸ್‌
ರಂಭ: ರಾತ್ರಿ 7.30

ಪುಣೇರಿ ಪಲ್ಟನ್‌–ಪಟ್ನಾ ಪೈರೇಟ್ಸ್‌
ಆರಂಭ: ರಾತ್ರಿ 8.30
ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.