ಪುಣೆ: ಭರತ್ ಅವರ ಚಾಣಾಕ್ಷ ರೇಡಿಂಗ್‌ನ ನೆರವಿನಿಂದ ಬೆಂಗಳೂರು ಬುಲ್ಸ್ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆಲುವು ಸಾಧಿಸಿದರು.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಬುಲ್ಸ್ 47–43 ಪಾಯಿಂಟ್ಸ್‌ಗಳಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿತು. ಎಂಟು ಪಂದ್ಯಗಳಲ್ಲಿ ಐದನೇ ಗೆಲುವು ಪಡೆದ ಬುಲ್ಸ್, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಪ್ರಥಮಾರ್ಧದಲ್ಲಿ 27–18 ರಿಂದ ಮುನ್ನಡೆ ಸಾಧಿಸಿದ್ದ ಬೆಂಗಳೂರಿನ ತಂಡಕ್ಕೆ ಭರತ್, 20 ಪಾಯಿಂಟ್ಸ್ ತಂದಿ ತ್ತರು. ಪ್ರತಿ ರೇಡಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ನೀಡಿದ ಅವರು ಎದುರಾಳಿ ತಂಡವನ್ನು ಕಾಡಿದರು.
ಬುಲ್ಸ್ ತಂಡದ ಸೌರಭ್ ನಂದಾಲ್ 6, ನೀರಜ್ ನರ್ವಾಲ್ 5 ಮತ್ತು ವಿಕಾಸ್ ಖಂಡೋಲ 4 ಪಾಯಿಂಟ್ಸ್ ಗಳಿಸಿದರು.
ನವೀನ್ ಕುಮಾರ್ (16 ಪಾಯಿಂಟ್ಸ್) ಮತ್ತು ಆಶು ಮಲಿಕ್ (15) ಅವರ ಚುರುಕಿನ ಆಟದ ಬಲದಿಂದ ದಬಾಂಗ್ ತಂಡ ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸಿ ದರೂ, ಕೊನೆಯವರೆಗೂ ಮುನ್ನಡೆ ಉಳಿಸಿಕೊಂಡ ಬುಲ್ಸ್ ಗೆಲುವಿನ ನಗು ಬೀರಿತು.
ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ದಬಾಂಗ್ ತಂಡ ಸತತ ಮೂರನೇ ಸೋಲು ಅನುಭವಿಸಿ, ಎರಡನೇ ಸ್ಥಾನಕ್ಕೆ ಕುಸಿತ ಕಂಡಿತು.
ದಿನದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 30–19 ರಲ್ಲಿ ತೆಲುಗು ಟೈಟನ್ಸ್ ತಂಡವನ್ನು ಪರಾಭವಗೊಳಿಸಿತು. ತಲಾ ಆರು ಪಾಯಿಂಟ್ಸ್ ಗಳಿಸಿದ ರಾಕೇಶ್ ಮತ್ತು ಸೌರವ್ ಗುಲಿಯಾ ಅವರು ಜೈಂಟ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್– ಜೈಪುರ ಪಿಂಕ್ ಪ್ಯಾಂಥರ್ಸ್
ತಮಿಳ್ ತಲೈವಾಸ್– ದಬಾಂಗ್ ಡೆಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.