ಬೆಂಗಳೂರು: ಮಿಂಚಿನ ದಾಳಿ ನಡೆಸಿದ ಅಸ್ಲಂ ಇನಾಮದಾರ್ ಅವರ ಆಟದ ನೆರವಿನಿಂದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧಜಯಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪುಣೇರಿ ತಂಡವು 32–24ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದಿತು.
ಅಸ್ಲಂ ರೇಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ಪುಣೇರಿಗೆ ಜಯದ ಕಾಣಿಕೆ ನೀಡಿದರು. ಮೋಹಿತ್ ಗೋಯತ್ (6) ಕೂಡ ಮಹತ್ವದ ಕಾಣಿಕೆ ನೀಡಿದರು.
ಮೊದಲಾರ್ಧದ ವಿರಾಮದ ವೇಳೆಗೆ ಪುಣೇರಿ ತಂಡವು 17–11ರಿಂದ ಮುನ್ನಡೆ ಗಳಿಸಿತು. ಪುಣೇರಿ ಆಟಗಾರರು ಎರಡನೇ ಹಂತದಲ್ಲಿಯೂ ಕಠಿಣ ಸವಾಲೊಡ್ಡಿದರು.
ಜೈಪುರ ತಂಡದ ಅರ್ಜುನ್ ದೇಶ್ವಾಲ್ (7), ರಾಹುಲ್ ಚೌಧರಿ (5) ರೇಡಿಂಗ್‌ನಲ್ಲಿ ಮಿಂಚಿದರು.
ಇನ್ನೊಂದು ಪಂದ್ಯದಲ್ಲಿ ಮೀತು ಶರ್ಮಾ (13) ಅವರ ಅಮೋಘ ರೇಡಿಂಗ್ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವು 43–24ರಿಂದ ತೆಲುಗು ಟೈಟನ್ಸ್ ವಿರುದ್ಧ ಪಾರಮ್ಯ ಮೆರೆಯಿತು.
ಹರಿಯಾಣ ತಂಡವು ಮೊದಲಾರ್ಧದದಲ್ಲಿಯೇ 24–11ರಿಂದ ದೊಡ್ಡ ಅಂತರದ ಮುನ್ನಡೆ ಸಾಧಿಸಿತು.
ಹರಿಯಾಣದ ನಿತಿನ್ ರಾವ್ ಹಾಗೂ ಜಯದೀಪ್ ದಹಿಯಾ ಕೂಡ ತಲಾ ನಾಲ್ಕು ಅಂಕಗಳನ್ನು ಗಳಿಸಿದರು.
ಟೈಟನ್ಸ್ ಪರವಾಗಿ ಸಿದ್ಧಾರ್ಥ್ ದೇಸಾಯಿ ಐದು ಅಂಕ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.