ADVERTISEMENT

ಪ್ರೊ ಕಬಡ್ಡಿ ಲೀಗ್‌ | ದೇಶ್ವಾಲ್‌ ಮಿಂಚು; ಜೈಪುರಕ್ಕೆ ಸುಲಭ ಗೆಲುವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:09 IST
Last Updated 23 ಅಕ್ಟೋಬರ್ 2024, 0:09 IST
ತೆಲುಗು ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಪಿಂಕ್‌ ಪ್ಯಾಂಥರ್ಸ್‌ ನಾಯಕ ಅರ್ಜುನ್ ದೇಶ್ವಾಲ್ ಅವರ ರೇಡಿಂಗ್‌ ವೈಖರಿ.
ತೆಲುಗು ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಪಿಂಕ್‌ ಪ್ಯಾಂಥರ್ಸ್‌ ನಾಯಕ ಅರ್ಜುನ್ ದೇಶ್ವಾಲ್ ಅವರ ರೇಡಿಂಗ್‌ ವೈಖರಿ.   

ಹೈದರಾಬಾದ್‌: ನಾಯಕ ಅರ್ಜುನ್‌ ದೇಶ್ವಾಲ್‌ ಅವರ ಅಮೋಘ ರೇಡಿಂಗ್‌ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 30 ಪಾಯಿಂಟ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿತು.

ಇದು ಜೈಪುರ ತಂಡಕ್ಕೆ ಎರಡನೇ ಜಯ. ಟೈಟನ್ಸ್ ತಂಡಕ್ಕೆ ಆಡಿರುವ ಮೂರು ಪಂದ್ಯಗಳಲ್ಲಿ ಇದು ಸತತ ಎರಡನೇ ಸೋಲು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ದಿನದ ಮೊದಲ ಹಣಾಹಣಿಯಲ್ಲಿ  ತೆಲುಗು ಟೈಟನ್ಸ್‌ ತಂಡವನ್ನು ನಾಲ್ಕು ಬಾರಿ ಆಲೌಟ್‌ ಮಾಡಿದ ಜೈಪುರ ತಂಡ 52-22 ಅಂಕಗಳಿಂದ ಭರ್ಜರಿ ಜಯ ಗಳಿಸಿತು. ಹಾಲಿ ಟೂರ್ನಿಯಲ್ಲಿ ತಂಡವೊಂದು ದಾಖಲಿಸಿದ ಅತಿ ದೊಡ್ಡ ಅಂತರದ ಗೆಲುವು ಇದಾಗಿದೆ. ವಿರಾಮದ ವೇಳೆ ವಿಜೇತ ತಂಡ 18–13ರಲ್ಲಿ ಮುಂದಿತ್ತು.

ADVERTISEMENT

ಆತಿಥೇಯ ತಂಡದ ಸ್ಟಾರ್‌ ರೈಡರ್‌ ಪವನ್‌ ಕುಮಾರ್‌ (7 ಅಂಕ) ಅವರನ್ನು ಪದೇ ಪದೆ ರಕ್ಷಣಾ ಕೋಟೆಯಲ್ಲಿ ಬಂಧಿಸಿ ಟೈಟನ್ಸ್‌ ತಂಡದ ಆತ್ಮವಿಶ್ವಾಸ ಕುಗ್ಗಿಸಿದ ಪ್ಯಾಂಥರ್ಸ್‌ ಆಟಗಾರರು, ದ್ವಿತೀಯಾರ್ಧದಲ್ಲಿ ಮೂರು ಬಾರಿ ಟೈಟನ್ಸ್‌ ತಂಡವನ್ನು ಆಲೌಟ್‌ ಮಾಡಿದರು.

ದೇಶ್ವಾಲ್‌ (19 ಅಂಕ) ಜತೆಗೆ ಅಭಿಜೀತ್‌ ಮಲಿಕ್‌ (8 ಅಂಕ) ಮತ್ತು ಸುರ್ಜೀತ್‌ (4 ಅಂಕ) ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಆರಂಭದಲ್ಲಿ ನಾಯಕ ಪವನ್‌ ಕುಮಾರ್‌ ಸೆಹ್ರಾವತ್ ಅವರ ಚಾಕಚಕ್ಯತೆಯ ರೇಡಿಂಗ್‌ನಿಂದ ಟೈಟನ್ಸ್‌ ತಂಡ ಮೊದಲ ಹತ್ತು ನಿಮಿಷಗಳ ಆಟದಲ್ಲಿ8-6 ಅಂಕಗಳಿಂದ ಮುನ್ನಡೆ ಸಾಧಿಸಿತು. ಜೈಪುರ ತಂಡದ ಪರ ಅರ್ಜುನ್‌ ಆರಂಭದಲ್ಲಿ ಏಕಾಂಗಿ ಹೋರಾಟ ನಡೆಸಿದರು. ಆದರೆ ಪವನ್‌ ಕುಮಾರ್‌ ಅವರನ್ನು ಟ್ಯಾಕಲ್‌ ಮಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದ ಜೈಪುರ ನಂತರ ಮೇಲುಗೈ ಸಾಧಿಸುತ್ತ ಹೋಯಿತು.

ಇಂದಿನ ಪಂದ್ಯಗಳು:

‌ತಮಿಳ್‌ ತಲೈವಾಸ್‌– ಪುಣೇರಿ ಪಲ್ಟನ್‌ (ರಾತ್ರಿ 8.00). ಗುಜರಾತ್‌ ಜಯಂಟ್ಸ್‌– ಯು ಮುಂಬಾ (9 ಗಂಟೆಗೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.