ADVERTISEMENT

ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್‌ ವಾರಿಯರ್ಸ್‌, ಪುಣೇರಿ ಪಲ್ಡನ್‌ ಜಯಭೇರಿ

ಮಣಿಂದರ್ ಸಿಂಗ್ ‘ಸೂಪರ್‌’ ಆಟಕ್ಕೆ ಒಲಿದ ಜಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 19:30 IST
Last Updated 24 ಜನವರಿ 2022, 19:30 IST
ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್‌ ಸಿಂಗ್ ಎದುರಾಳಿ ತಂಡದ ಆವರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು
ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್‌ ಸಿಂಗ್ ಎದುರಾಳಿ ತಂಡದ ಆವರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು   

ಬೆಂಗಳೂರು: ಮತ್ತೊಮ್ಮೆ ‘ಸೂಪರ್’ ಆಟ ಪ್ರದರ್ಶಿಸಿದ ನಾಯಕ ಮಣಿಂದರ್ ಸಿಂಗ್ ಬೆಂಗಾಲ್ ವಾರಿಯರ್ಸ್‌ಗೆ ಜಯ ತಂದುಕೊಟ್ಟರು. ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಸೋಮವಾರದ ಪಂದ್ಯದಲ್ಲಿ ಮಣಿಂದರ್ ಗಳಿಸಿದ 13 ಪಾಯಿಂಟ್‌ಗಳ ಬಲದಿಂದ ಬೆಂಗಾಲ್‌ 41–22ರಲ್ಲಿ ಜೈಪುರ್ ಪಿಂಕ್‌ ಪ್ಯಾಂಥರ್ಸ್‌ ಎದುರು ಜಯ ಗಳಿಸಿತು.

ಜೈಪುರ್ ತಂಡದ ಅರ್ಜುನ್ ದೇಶ್ವಾಲ್‌ ಕೂಡ ಸೂಪರ್ ಟೆನ್ ಸಾಧನೆ ಮಾಡಿದರು. ಆದರೆ ಇತರ ರೇಡರ್‌ಗಳಿಂದ ಮತ್ತು ಟ್ಯಾಕ್ಲಿಂಗ್ ವಿಭಾಗದಿಂದ ಅವರಿಗೆ ನಿರೀಕ್ಷೆಗೆ ತಕ್ಕ ಸಹಕಾರ ಸಿಗಲಿಲ್ಲ. ಬೆಂಗಾಲ್‌ ಆಲ್‌ರೌಂಡ್ ಆಟದ ಮೂಲಕ ಮಿಂಚಿತು. ಡಿಫೆನ್ಸ್ ವಿಭಾಗದ ರಣ್ ಸಿಂಗ್ 4 ಪಾಯಿಂಟ್ ಗಳಿಸಿದರೆ ವಿಶಾಲ್ ಮಾನೆ ಮತ್ತು ಅಬೋಜರ್ ಮಿಘಾನಿ ತಲಾ 2 ಪಾಯಿಂಟ್ ಕಲೆ ಹಾಕಿದರು.

ಜೈಪುರ್‌ ತಂಡ ದೀಪಕ್ ಹೂಡಾ ಅವರ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದಿತ್ತು. ಹೀಗಾಗಿ ರೇಡಿಂಗ್ ವಿಭಾಗದಲ್ಲಿ ಅರ್ಜುನ್ ದೇಶ್ವಾಲ್ ಅವರ ಜವಾಬ್ದಾರಿ ಹೆಚ್ಚಿತ್ತು. ಅವರು 3 ಬೋನಸ್ ಪಾಯಿಂಟ್ ಸೇರಿದಂತೆ 10 ಪಾಯಿಂಟ್ ಗಳಿಸಿದರು. ಅಮಿತ್ ನಗಾರ್ 6 ‍ಪಾಯಿಂಟ್ ಕಲೆ ಹಾಕಿದರು. ಬೆಂಗಾಲ್ ಪರ ಮೊಹಮ್ಮದ್ ನಬಿಭಕ್ಷ್‌ 6 ಪಾಯಿಂಟ್ ಗಳಿಸಿದರೆ ಸುಕೇಶ್ ಹೆಗಡೆ 4 ಪಾಯಿಂಟ್ ಕಲೆ ಹಾಕಿದರು.

ADVERTISEMENT

ರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ 42–25ರಲ್ಲಿ ದಬಂಗ್ ಡೆಲ್ಲಿಯನ್ನು ಮಣಿಸಿತು. ಪುಣೇರಿ ಪರ ಮೋಹಿತ್ ಗೋಯತ್ 10 ಪಾಯಿಂಟ್ ಗಳಿಸಿದರು. ಅಸ್ಲಾಂ ಇನಾಮದಾರ್‌ 8, ನಿತಿನ್ ತೋಮರ್ ಮತ್ತು ಡಿಫೆಂಡರ್ ಸೋಮ್‌ವೀರ್‌ ತಲಾ 6 ಪಾಯಿಂಟ್ ಕಲೆ ಹಾಕಿದರು. ‌

ಡೆಲ್ಲಿ ತಂಡಕ್ಕಾಗಿ ಆಲ್‌ರೌಂಡರ್ ವಿಜಯ್ 8, ರೇಡರ್‌ ನೀರಜ್ ನರ್ವಾಲ್ 6, ಆಲ್‌ರೌಂಡರ್‌ ಸಂದೀಪ್ ನರ್ವಾಲ್ 5 ಪಾಯಿಂಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.