ADVERTISEMENT

ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ: ಗುಜರಾತ್ ಟೈಟನ್ಸ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 23:40 IST
Last Updated 31 ಡಿಸೆಂಬರ್ 2023, 23:40 IST
ಗುಜರಾತ್ ಟೈಟನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಣ ಪಂದ್ಯ –ಪಿಟಿಐ ಚಿತ್ರ
ಗುಜರಾತ್ ಟೈಟನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಣ ಪಂದ್ಯ –ಪಿಟಿಐ ಚಿತ್ರ   

ನೊಯ್ಡಾ: ಭರತ್ ನಡೆಸಿದ ಮಿಂಚಿನ ದಾಳಿಯ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ತಮಿಳ್ ತಲೈವಾಸ್ ಎದುರು ರೋಚಕ ಜಯ ಸಾಧಿಸಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 38–37ರಿಂದ ತಲೈವಾಸ್ ವಿರುದ್ಧ ಗೆದ್ದಿತು.

ಪಂದ್ಯದ ಮೊದಲಾರ್ಧದಲ್ಲಿ ತಲೈವಾಸ್ ತಂಡವು 20–17ರ ಮುನ್ನಡೆ ಸಾಧಿಸಿತ್ತು. ತಂಡದ ನರೇಂದರ್ ಅವರು ಉತ್ತಮ ದಾಳಿ ಸಂಘಟಿಸಿ 12 ಅಂಕಗಳನ್ನು ಗಳಿಸಿದರು.

ADVERTISEMENT

ಆದರೆ ವಿರಾಮದ ನಂತರ ಚುರುಕಾದ ಆಟ ತೋರಿಸಿದ ಬೆಂಗಳೂರು ಬಳಗವು ಮುನ್ನಡೆ ಸಾಧಿಸಿತು. ಕೇವಲ ಒಂದು ಅಂಕದ ಅಂತರದಿಂದ ಜಯಿಸಿತು. ಭರತ್ 10 ಅಂಕ ಗಳಿಸಿದರು. ರೇಡರ್ ವಿಕಾಸ್ ಖಂಡೋಲಾ, ನೀರಜ್ ನರ್ವಾಲ್ ಮತ್ತು ಸೌರಭ್ ನಂದಾಲ್ ತಲಾ 4 ಅಂಕ ಗಳಿಸಿದರು.

ಟೂರ್ನಿಯಲ್ಲಿ ಬೆಂಗಳೂರು ತಂಡವು ಒಟ್ಟು ಹತ್ತು ಪಂದ್ಯಗಳನ್ನು ಆಡಿ ನಾಲ್ಕರಲ್ಲಿ ಜಯಿಸಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಗುಜರಾತ್‌ಗೆ ಜಯ: ರೇಡರ್ ಪ್ರತೀಕ್ ದಹಿಯಾ ಗಳಿಸಿದ 25 ಅಂಕಗಳ ಬಲದಿಂದ ಗುಜರಾತ್ ಟೈಟನ್ಸ್ ತಂಡವು 51–42 ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಿಸಿತು.

ಪಂದ್ಯದ ಆರಂಭದಿಂದಲೂ ಮುನ್ನಡೆ ಸಾಧಿಸಿದ ಗುಜರಾತ್ ತಂಡವು ಪ್ರಥಮಾರ್ಧದಲ್ಲಿ 28–17 ಮೇಲುಗೈ ಪಡೆದಿತ್ತು.

ಅದೇ ಲಯವನ್ನು  ವಿರಾಮದ ನಂತರವೂ ಗುಜರಾತ್ ಮುಂದುವರಿಸಿತು.  ಒಂದು ಹಂತದಲ್ಲಿ ಬಂಗಾಳ ತಂಡವೂ ತುಸು ಪ್ರತಿರೋಧ ಒಡ್ಡಿತು. ಈ ಅವಧಿಯಲ್ಲಿ ಬಂಗಾಳ ತಂಡವು ಗುಜರಾತ್‌ಗಿಂತ ಹೆಚ್ಚು ಅಂಕ ಗಳಿಸಿತು. ಆದರೆ ಟೈಟನ್ಸ್‌ಗೆ ಮೊದಲ ಅವಧಿಯ ಸಾಧನೆ ಕೈಹಿಡಿಯಿತು. 

ಬಂಗಾಳ ತಂಡದ ಮಣಿಂದರ್ ಸಿಂಗ್ (11) ಮತ್ತು ನಿತಿನ್ ಕುಮಾರ್ (12)  ಉತ್ತಮವಾಗಿ ಆಡಿದರು.

ಇಂದಿನ ಪಂದ್ಯಗಳು

ತೆಲುಗು ಟೈಟನ್ಸ್‌–ಪುಣೇರಿ ಪಲ್ಟನ್ (ರಾತ್ರಿ 8)

ಯುಪಿ ಯೋಧಾಸ್–ಪಟ್ನಾ ಪೈರೆಟ್ಸ್ (ರಾತ್ರಿ 9)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.