ADVERTISEMENT

ಪ್ರೊ ಕಬಡ್ಡಿ: ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್

ದಬಂಗ್ ಡೆಲ್ಲಿಗೆ ಎರಡನೇ ಜಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 18:39 IST
Last Updated 24 ಡಿಸೆಂಬರ್ 2021, 18:39 IST
ಬೆಂಗಳೂರು ಬುಲ್ಸ್‌ ತಂಡದ ರೇಡರ್ ಭರತ್
ಬೆಂಗಳೂರು ಬುಲ್ಸ್‌ ತಂಡದ ರೇಡರ್ ಭರತ್    

ಬೆಂಗಳೂರು: ನಾಯಕ ಪವನ್ ಶೆರಾವತ್ ಮಿಂಚಿನ ಆಟದ ಬಲದಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲ ಜಯ ದಾಖಲಿಸಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 38–30ರಿಂದ ತಮಿಳ್ ತಲೈವಾಸ್ ವಿರುದ್ಧ ಜಯಭೇರಿ ಬಾರಿಸಿತು.

ಬುಲ್ಸ್ ತಂಡವು ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಪವನ್ ಚುರುಕಿನ ದಾಳಿ ನಡೆಸಿ ಒಂಬತ್ತು ಪಾಯಿಂಟ್ಸ್‌ ಗಳಿಸಿದರು. ಅವರು ಒಟ್ಟು 16 ಬಾರಿ ದಾಳಿ ಮಾಡಿ, ಎಂಟರಲ್ಲಿ ಯಶಸ್ವಿಯಾದರು. ಎರಡು ಬಾರಿ ಖಾಲಿ ಕೈನಲ್ಲಿ ಮರಳಿದರು. ಅವರಿಗೆ ಉತ್ತಮ ಜೊತೆ ನೀಡಿದ ಚಂದ್ರನ್ ರಂಜೀತ್ ಏಳು ಅಂಕ ಗಳಿಸಿದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸೌರಭ್ ನಂದಾಲ್ ಐದು ಅಂಕ ಗಳಿಸಿ ಮಿಂಚಿದರು.

ADVERTISEMENT

ತಲೈವಾಸ್ ತಂಡವು ಮೊದಲಾರ್ಧದಲ್ಲಿ ಕಠಿಣ ಪೈಪೋಟಿಯೊಡ್ಡಿತು. ತಂಡದ ಭವಾನಿ ರಜಪೂತ ದಾಳಿಯಲ್ಲಿ ಎಂಟು ಅಂಕಗಳನ್ನು ಗಳಿಸಿದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸಾಗರ್ ಐದು ಅಂಕ ಪಡೆದರು.

ಡೆಲ್ಲಿ ಜಯಭೇರಿ:ಅಮೋಘ ದಾಳಿ ಸಂಘಟಿಸಿದ ನವೀನಕುಮಾರ್ ಆಟದ ಬಲದಿಂದ ದಬಂಗ್ ಡೆಲ್ಲಿ ತಂಡವು ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು.

ಡೆಲ್ಲಿ ತಂಡವು 31–27ರಿಂದ ಯು ಮುಂಬಾ ವಿರುದ್ಧ ಜಯಿಸಿತು. ನವೀನಕುಮಾರ್ ಒಟ್ಟು 17 ಅಂಕಗಳನ್ನು ಗಳಿಸಿದರು. ಅವರು ರೇಡಿಂಗ್‌ನಲ್ಲಿ 12, ಟ್ಯಾಕಲ್‌ನಲ್ಲಿ 1 ಮತ್ತು ನಾಲ್ಕು ಬೋನಸ್ ಅಂಕಗಳನ್ನು ಜೇಬಿಗಿಳಿಸಿಕೊಂಡರು. ಜೋಗಿಂದರ್ ಸಿಂಗ್ ನರ್ವಾಲ್ ನಾಲ್ಕು ಟ್ಯಾಕಲ್ ಪಾಯಿಂಟ್ ಗಳಿಸಿ ತಂಡಕ್ಕೆ ಬಲ ತುಂಬಿದರು.

ಮುಂಬಾ ತಂಡದ ವಿ. ಅಜಿತಕುಮಾರ್ ಏಳು ಮತ್ತು ಅಭಿಷೇಕ್ ಸಿಂಗ್ ಐದು ಅಂಕಗಳನ್ನು ರೇಡಿಂಗ್‌ನಲ್ಲಿ ಗಳಿಸಿದರು. ಆದರೆ, ತಂಡದ ಟ್ಯಾಕ್ಲಿಂಗ್‌ನಲ್ಲಿ ಆದ ಲೋಪಗಳನ್ನು ಬಳಸಿಕೊಂಡ ಡೆಲ್ಲಿ ತಂಡವು ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.