ಮುಂಬೈ: ಅಜಿತ್ ವಿ ಕುಮಾರ್, ಜೈ ಭಗವಾನ್ ಮತ್ತು ಅರ್ಜುನ್ ರಾಠಿ ಅವರು ಪ್ರೊ ಕಬಡ್ಡಿ 11ನೇ ಆವೃತ್ತಿಗಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಮೊತ್ತ ಪಡೆದರು.
ಹರಾಜು ಪ್ರಕ್ರಿಯೆಯ ಎರಡನೇ ದಿನವಾದ ಶುಕ್ರವಾರ ಫ್ರ್ಯಾಂಚೈಸಿ ಮಾಲೀಕರು ಒಟ್ಟು ₹ 16 ಕೋಟಿ ಖರ್ಚು ಮಾಡಿದರು. ಈ ದಿನ ಸಿ ಕೆಟಗರಿಯಲ್ಲಿದ್ದ ಅಜಿತ್ ಅವರನ್ನು ಪುಣೇರಿ ಪಲ್ಟನ್ ತಂಡವು (₹ 66 ಲಕ್ಷ), ಭಗವಾನ್ (₹ 63 ಲಕ್ಷ) ಅವರನ್ನು ಬೆಂಗಳೂರು ಬುಲ್ಸ್ ತಂಡವು ಖರೀದಿಸಿತು. ಡಿ ಕೆಟಗರಿಯಲ್ಲಿದ್ದ ಅರ್ಜುನ್ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡವು ₹ 41 ಲಕ್ಷಕ್ಕೆ ಖರೀದಿಸಿತು.
ಮೊದಲ ದಿನವಾದ ಗುರುವಾರ ಎಂಟು ಆಟಗಾರರು ಒಂದು ಕೋಟಿಗೂ ಹೆಚ್ಚು ಮೊತ್ತ ಪಡೆದಿದ್ದು ವಿಶೇಷ. ಒಟ್ಟು 12 ತಂಡಗಳು ಆಟಗಾರರ ಖರೀದಿ ಮಾಡಿದವು.
‘ಈ ಬಾರಿಯದ್ದು ಅಮೋಘವಾದ ಹರಾಜು ಪ್ರಕ್ರಿಯೆಯಾಗಿದೆ. ಎಂಟು ಆಟಗಾರರು ಒಂದು ಕೋಟಿಗೂ ಹೆಚ್ಚು ಮೊತ್ತ ಪಡೆದರು. ಸಿ ಕೆಟಗರಿಯ ಆಟಗಾರರಾದ ಅಜಿತ್ ವಿ ಕುಮಾರ್ ಮತ್ತು ಜೈ ಭಗವಾನ್ ಅವರು ₹ 60 ಲಕ್ಷ ಕ್ಕೂ ಹೆಚ್ಚು ಮೊತ್ತ ಗಳಿಸಿದರು. ಎಲ್ಲ ಫ್ರ್ಯಾಂಚೈಸಿಗಳು ಸಮತೋಲನವಾದ ತಂಡಗಳನ್ನು ರಚಿಸಿವೆ. ಮುಂಬರುವ ಋತುವಿನ ಟೂರ್ನಿಯು ಅತ್ಯಂತ ಸ್ಪರ್ಧಾತ್ಮಕವಾಗುವ ನಿರೀಕ್ಷೆ ಇದೆ’ ಎಂದು ಲೀಗ್ ಮುಖ್ಯಸ್ಥ, ಮಶಾಲ್ ಸ್ಪೋರ್ಟ್ಸ್ ಮತ್ತು ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಹರಾಜಿನ ಮೊದಲ ದಿನವಾದ ಗುರುವಾರ ನಡೆದ ಎ ಕೆಟಗರಿಯ ಬಿಡ್‌ನಲ್ಲಿ ಸಚಿನ್ ತನ್ವರ್ ₹ 2.15 ಕೋಟಿ ಗಳಿಸಿದರು. ಈ ಋತುವಿನಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದ ಆಟಗಾರನಾದರು.
ಬೆಂಗಳೂರು ಬುಲ್ಸ್ ತಂಡವು ಅಜಿಂಕ್ಯ ಪವಾರ್ ಅವರಿಗೆ 1.107 ಕೋಟಿ ಕೊಟ್ಟು ಖರೀದಿಸಿದೆ. ಥಾಯ್ಲೆಂಡಿನ ಹಸುನ್ ತೊಂಗ್‌ಕ್ರುವಿಯಾ ಅವರನ್ನು 13 ಲಕ್ಷಕ್ಕೆ ಖರೀದಿಸಿದೆ.
ಪ್ರೊ ಕಬಡ್ಡಿ ಹರಾಜಿನಲ್ಲಿ ದೊಡ್ಡ ಮೊತ್ತ ಗಳಿಸಿ ಗಮನ ಸೆಳೆದ ಸಿ ವಿಭಾಗದ ಆಟಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.