ADVERTISEMENT

ಪ್ರೊ ಕಬಡ್ಡಿ ಲೀಗ್: ಖಾತೆ ತೆರೆದ ಬೆಂಗಾಲ್‌ ವಾರಿಯರ್ಸ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 23:46 IST
Last Updated 24 ಅಕ್ಟೋಬರ್ 2024, 23:46 IST
ಯುಪಿ ಯೋಧಾಸ್ ತಂಡದ ಆಟಗಾರರು ಬೆಂಗಾಲ್ ವಾರಿಯರ್ಸ್ ತಂಡದ ರೇಡರ್‌ನನ್ನು ಹಿಡಿದೆಳೆಯಲು ಯತ್ನಿಸಿದರು.
ಯುಪಿ ಯೋಧಾಸ್ ತಂಡದ ಆಟಗಾರರು ಬೆಂಗಾಲ್ ವಾರಿಯರ್ಸ್ ತಂಡದ ರೇಡರ್‌ನನ್ನು ಹಿಡಿದೆಳೆಯಲು ಯತ್ನಿಸಿದರು.   

ಹೈದರಾಬಾದ್‌: ಪಂದ್ಯದ ಕೊನೆಯ ಹಂತದಲ್ಲಿ ಗಳಿಸಿದ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯಲ್ಲಿ ಯು.ಪಿ. ಯೋಧಾಸ್‌ ತಂಡವನ್ನು ಗುರುವಾರ ಮೂರು ಅಂಕಗಳಿಂದ ಮಣಿಸಿ ಗೆಲುವಿನ ಖಾತೆ ತೆರೆಯಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಫಜ್ಹಲ್‌ ಅತ್ರಾಚಲಿ ಬಳಗ ಸಾಂಘಿಕ ಪ್ರಯತ್ನದಿಂದ 32- 29 ಅಂಕಗಳಿಂದ ಜಯಗಳಿಸಿತು. ಸತತ ಎರಡು ಗೆಲುವುಗಳಿಂದ ಬೀಗಿದ್ದ ಯೋಧಾಸ್‌ ಮೊದಲ ಸೋಲು ಕಂಡಿತು.

ಬೆಂಗಾಲ್‌ ತಂಡದ ಪರ ಸ್ಟಾರ್‌ ರೇಡರ್‌ ಮಣಿಂದರ್‌ (8 ಅಂಕ), ಸುಶೀಲ್‌ (7 ಅಂಕ) ಮತ್ತು ನಿತಿನ್‌ ಧಂಕರ್‌ (7 ಅಂಕ) ಉತ್ತಮ ಪ್ರದರ್ಶನ ನೀಡಿದರು. ಯೋಧಾಸ್‌ ತಂಡದ ಪರ ಆಲ್‌ರೌಂಡರ್‌ ಭರತ್‌ (13 ಅಂಕ) ಏಕಾಂಗಿಯಾಗಿ ಹೋರಾಟ ನಡೆಸಿದರೂ ತಂಡವನ್ನು ಮೊದಲ ಸೋಲಿನಿಂದ ಪಾರು
ಮಾಡಲು ಸಾಧ್ಯವಾಗಲಿಲ್ಲ.

ADVERTISEMENT

ವಿರಾಮದ ವೇಳೆಗೆ ಬೆಂಗಾಲ್ 12–11ರಲ್ಲಿ ಒಂದು ಪಾಯಿಂಟ್‌ ಮುನ್ನಡೆ ಪಡೆದಿತ್ತು. ಆದರೆ ನಂತರ ಮುನ್ನಡೆ ಅದಲುಬದಲಾಗುತ್ತ ಹೋಯಿತು. 32ನೇ ನಿಮಿಷ ದಾಳಿಗಿಳಿದ ನಿತಿನ್‌ ಧಂಕರ್‌ ಯೋಧಾಸ್‌ ತಂಡವನ್ನು ಪಂದ್ಯದಲ್ಲಿ ಮೊದಲ ಬಾರಿ ಆಲೌಟ್‌ ಮಾಡಿ, ತಂಡದ ಮುನ್ನಡೆಯನ್ನು 21-19 ರಿಂದ 25-21ಕ್ಕೆ ಹಿಗ್ಗಿಸಿದರು. 30ನೇ  ನಿಮಿಷದವರೆಗೂ ರಕ್ಷಣಾತ್ಮಕ ಆಟದೊದಿಗೆ ಅಂಗಣ ಕಾಯ್ದುಕೊಂಡಿದ್ದ ಯೋಧಾಸ್‌, ಸಮನ್ವಯತೆ ಕೊರತೆಯಿಂದ ಆಲೌಟ್‌ ಬಲೆಗೆ ಬಿತ್ತು. ಕೊನೆಗಳಿಗೆಯಲ್ಲಿ ಭರತ್ ಮತ್ತು ಭವಾನಿ ರಜಪೂತ್‌, ಯೋಧಾಸ್‌ಗೆ ಪಾಯಿಂಟ್ಸ್‌ ಗಳಿಸಿಕೊಟ್ಟರೂ ಹಿನ್ನಡೆ ಅಳಿಸಲಾಗಲಿಲ್ಲ.

ಶುಕ್ರವಾರದ ಪಂದ್ಯಗಳು:

ಪಟ್ನಾ ಪೈರೇಟ್ಸ್‌– ತಮಿಳ್ ತಲೈವಾಸ್‌ (ರಾತ್ರಿ 8.00). ಬೆಂಗಳೂರು  ಬುಲ್ಸ್– ಪುಣೇರಿ ಪಲ್ಟನ್ (9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.