ADVERTISEMENT

ಕಬಡ್ಡಿ: ಪವನ್ ‘ಸೂಪರ್–20’; ಬುಲ್ಸ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 5:08 IST
Last Updated 18 ಫೆಬ್ರುವರಿ 2022, 5:08 IST
ಚಿತ್ರ ಕೃಪೆ: @BengaluruBulls
ಚಿತ್ರ ಕೃಪೆ: @BengaluruBulls   

ಬೆಂಗಳೂರು: ಅಮೋಘ ಲಯದಲ್ಲಿರುವ ಪವನ್ ಶೆರಾವತ್ ಮತ್ತೊಮ್ಮೆ ‘ಸೂಪರ್–20’ ಸಾಧನೆಯೊಂದಿಗೆ ಮಿಂಚಿದರು. ಅವರ ಭರ್ಜರಿ ಆಲ್‌ರೌಂಡ್‌ ಆಟಕ್ಕೆ ಭರತ್ ಉತ್ತಮ ಸಹಕಾರ ನೀಡಿದರು. ಇದರಿಂದಾಗಿ ಬೆಂಗಳೂರು ಬುಲ್ಸ್ ತಂಡ ಗೆಲುವಿನ ನಗೆ ಸೂಸಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಆವರಣದಲ್ಲಿ ನಡೆಯತ್ತಿರುವ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಬುಲ್ಸ್ 46-24ರಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯ
ಗಳಿಸಿತು.

ಪವನ್ ಶೆರಾವತ್ 7 ಟ್ಯಾಕಲ್‌ ಮತ್ತು 2 ಬೋನಸ್ ಪಾಯಿಂಟ್‌ಗಳೊಂದಿಗೆ 20 ಪಾಯಿಂಟ್‌ಗಳನ್ನು ಕಲೆ ಹಾಕಿದರು. ಭರತ್‌ 3 ಟ್ಯಾಕಲ್ ಮತ್ತು 1 ಬೋನಸ್‌ ಸೇರಿದಂತೆ 8 ಪಾಯಿಂಟ್ ಕಲೆ ಹಾಕಿದರು. ಅಮನ್ 4, ಚಂದ್ರನ್ ರಂಜಿತ್ ಮತ್ತು ಸೌರಭ್ ನಂದಾಲ್‌ ತಲಾ 3 ಪಾಯಿಂಟ್ ಗಳಿಸಿದರು.

ADVERTISEMENT

ಹರಿಯಾಣ ಸ್ಟೀಲರ್ಸ್ ಪರ ನಾಯಕ ವಿಕಾಸ್ ಖಂಡೋಲ ಅವರೊಂದಿಗೆ ಆಶಿಶ್ ಮತ್ತು ಸುರೇಂದರ್ ನಾಡಾ ತಲಾ 4 ಪಾಯಿಂಟ್ ಗಳಿಸಿದರು. ಬೇರೆ ಯಾರಿಗೂ ಮಿಂಚಲು ಸಾಧ್ಯವಾಗಲಿಲ್ಲ.

ಯೋಧಾಗೆ ಮಣಿದ ಮುಂಬಾ

ರಾತ್ರಿ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಯು.ಪಿ ಯೋಧಾ ಎದುರು ಸೋಲುಂಡಿತು. ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ ಯೋಧಾ ಮೊದಲಾರ್ಧದ ಮುಕ್ತಾಯದ ವೇಳೆ 18–12ರ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಇನ್ನಷ್ಟು ಪ್ರಾಬಲ್ಯ ಮೆರೆಯಿತು.

ಸುರೇಂದರ್ ಗಿಲ್ ಎಂಟು ಪಾಯಿಂಟ್‌ಗಳೊಂದಿಗೆ ಮಿಂಚಿದರೆ ಪ್ರದೀಪ್ ನರ್ವಾಲ್ ಆರು ಪಾಯಿಂಟ್ ಗಳಿಸಿದರು. ಆಶು ಸಿಂಗ್, ಶುಭಂ ಕುಮಾರ್, ಸುಮಿತ್ ಮತ್ತು ಶ್ರೀಕಾಂತ್ ತಲಾ ಮೂರು ಪಾಯಿಂಟ್‌ಗಳೊಂದಿಗೆ ತಂಡಕ್ಕೆ ಕಾಣಿಕೆ ನೀಡಿದರು.

ಯು ಮುಂಬಾ ತಂಡದ ಪರ ಅಜಿತ್ ಕುಮಾರ್ ಮತ್ತು ರಿಂಕು ಮಾತ್ರ ಸ್ವಲ್ಪ ಮಿಂಚಿದರು. ಅವರು ತಲಾ ಐದು ಪಾಯಿಂಟ್ ಗಳಿಸಿದರೆ ಅಭಿಷೇಕ್ ಸಿಂಗ್ ಮತ್ತು ಹರೇಂದ್ರ ಕುಮಾರ್ ತಲಾ ನಾಲ್ಕುಯ ಪಾಯಿಂಟ್ ಗಳಿಸಿದರು.

ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ಮತ್ತು ಬೆಂಗಾಲ್ ವಾರಿಯರ್ಸ್ ಸೆಣಸಲಿವೆ. ಬಳಿಕ ತೆಲುಗು ಟೈಟನ್ಸ್– ದಬಂಗ್ ಡೆಲ್ಲಿ ಮತ್ತು ಮೂರನೇ ಹಣಾಹಣಿಯಲ್ಲಿ ತಮಿಳ್‌ ತಲೈವಾಸ್‌ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.