ADVERTISEMENT

ಪ್ರೊ ಕಬಡ್ಡಿ: 10ನೇ ಆವೃತ್ತಿ ಇಂದಿನಿಂದ

ಚಾಂಪಿಯನ್‌ ಕಿರೀಟಕ್ಕೆ 12 ತಂಡಗಳ ಪೈಪೋಟಿ, ಡಿ.8ರಿಂದ ಬೆಂಗಳೂರು ಲೆಗ್‌ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 20:50 IST
Last Updated 1 ಡಿಸೆಂಬರ್ 2023, 20:50 IST
ಅಹಮದಾಬಾದ್‌ನ ಸಬರಮತಿ ನದಿಯಲ್ಲಿ ಅಕ್ಷರ್‌ ರಿವರ್‌ ಕ್ರೂಸ್‌ನಲ್ಲಿ ಶುಕ್ರವಾರ ಟೂರ್ನಿಗೆ ಚಾಲನೆ ನೀಡಲಾಯಿತು. ಪ್ರೊ ಕಬಡ್ಡಿ ಲೀಗ್‌ನ ಕಮಿಷನರ್‌ ಅನುಪಮ್‌ ಗೋಸ್ವಾಮಿ ಹಾಗೂ 12 ತಂಡಗಳ ನಾಯಕರು ಇದ್ದರು.
ಅಹಮದಾಬಾದ್‌ನ ಸಬರಮತಿ ನದಿಯಲ್ಲಿ ಅಕ್ಷರ್‌ ರಿವರ್‌ ಕ್ರೂಸ್‌ನಲ್ಲಿ ಶುಕ್ರವಾರ ಟೂರ್ನಿಗೆ ಚಾಲನೆ ನೀಡಲಾಯಿತು. ಪ್ರೊ ಕಬಡ್ಡಿ ಲೀಗ್‌ನ ಕಮಿಷನರ್‌ ಅನುಪಮ್‌ ಗೋಸ್ವಾಮಿ ಹಾಗೂ 12 ತಂಡಗಳ ನಾಯಕರು ಇದ್ದರು.   

ಅಹಮದಾಬಾದ್‌: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) 10ನೇ ಆವೃತ್ತಿಯ ಪಂದ್ಯಗಳು ಶನಿವಾರದಿಂದ ನಡೆಯಲಿವೆ. 2014ರಲ್ಲಿ ಆರಂಭವಾದ ಪಿಕೆಎಲ್‌, ಭಾರತದಲ್ಲಿ ಐಪಿಎಲ್‌ ಬಳಿಕ ಅತಿ ಹೆಚ್ಚು ವೀಕ್ಷಣೆ ಹೊಂದಿರುವ ಎರಡನೇ ಕ್ರೀಡಾ ಲೀಗ್ ಆಗಿದೆ. ಈ ಬಾರಿಯೂ 12 ತಂಡಗಳು ಚಾಂಪಿಯನ್‌ ಕಿರೀಟಕ್ಕಾಗಿ ಪೈಪೋಟಿ ನಡೆಸಲಿವೆ.

ಶನಿವಾರ ರಾತ್ರಿ 8ಕ್ಕೆ ಆರಂಭವಾಗುವ ಹೈವೋಲ್ಟೇಜ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಸೆಣಸಲಿದೆ. ಮೊದಲ ಪಂದ್ಯದಲ್ಲೇ ಇರಾನ್‌ನ ಸ್ಟಾರ್ ಆಟಗಾರ ಫಝಲ್ ಅತ್ರಾಚಲಿ ಮತ್ತು ಭಾರತ ಕಬಡ್ಡಿ ತಂಡದ ನಾಯಕ ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದಾರೆ.

ರಾತ್ರಿ 9ಕ್ಕೆ ನಡೆಯುವ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವು ಯುಪಿ ಯೋಧಾಸ್‌ ಜತೆ ಸೆಣಸಲಿದೆ. ಬೆಂಗಳೂರು ಬುಲ್ಸ್‌ ತಂಡವು ಡಿ. 3ರಂದು ಗುಜರಾತ್‌ ಜೈಂಟ್ಸ್‌ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.

ADVERTISEMENT

ತವರು ನೆಲದಲ್ಲಿ ಪಂದ್ಯಗಳು: ಈ ಬಾರಿ ಎಲ್ಲ ಫ್ರಾಂಚೈಸ್‌ಗಳ ತವರು ನೆಲದಲ್ಲಿ ಪಂದ್ಯಗಳು ಆಯೋಜನೆಯಾಗಿವೆ. ಮೊದಲ ಲೆಗ್‌ನ ಪಂದ್ಯಗಳು ಅಹಮದಾಬಾದ್‌ನಲ್ಲಿ ಡಿ.2 ರಿಂದ 7ರವರೆಗೆ, ಎರಡನೇ ಲೆಗ್‌ನ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಡಿ.8 ರಿಂದ 13ರ ವರೆಗೆ ಆಯೋಜನೆಯಾಗಿವೆ. ನಂತರ ಕ್ರಮವಾಗಿ ಪುಣೆ (ಡಿ.15–20), ಚೆನ್ನೈ (ಡಿ.22–27), ನೋಯ್ಡಾ (ಡಿ.29– ಜ.3, 2024), ಮುಂಬೈ (ಜ.5–10), ಜೈಪುರ (ಜ.12–17), ಹೈದರಾಬಾದ್ (ಜ.19–24), ಪಟ್ನಾ (ಜ.26–31), ದೆಹಲಿ (ಫೆ. 2–7), ಕೋಲ್ಕತ್ತ (ಫೆ.9–14), ಪಂಚಕುಲದಲ್ಲಿ (ಫೆ.16–21) ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ.‌

ಒಂಬತ್ತು ಆವೃತ್ತಿಗಳಲ್ಲಿ ಆರು ತಂಡಗಳು ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ಮೊದಲ ಆವೃತ್ತಿ ಮತ್ತು 9ನೇ ಆವೃತ್ತಿಯಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ಕಿರೀಟ ಮುಡಿಗೇರಿಸಿಕೊಂಡಿದೆ. ಪಟ್ನಾ ಪೈರೆಟ್ಸ್‌ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯಶಸ್ವಿ ತಂಡ ಎನಿಸಿಕೊಂಡಿದೆ. ಬೆಂಗಳೂರು ಬುಲ್ಸ್‌ ತಂಡವು ರೋಹಿತ್‌ ಕುಮಾರ್‌ ಸಾರಥ್ಯದಲ್ಲಿ 2018ರಲ್ಲಿ ಪ್ರಶಸ್ತಿ ಗೆದ್ದಿತ್ತು. ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟಾನ್ಸ್ ಮತ್ತು ಯುಪಿ ಯೋಧಾ ತಂಡಗಳು ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿವೆ.

ಅದ್ಧೂರಿ ಚಾಲನೆ: ಅಹಮದಾಬಾದ್‌ನ ಸಬರಮತಿ ನದಿಯಲ್ಲಿ ಅಕ್ಷರ್‌ ರಿವರ್‌ ಕ್ರೂಸ್‌ನಲ್ಲಿ ಶುಕ್ರವಾರ ಟೂರ್ನಿಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಪ್ರೊ ಕಬಡ್ಡಿ ಕಮಿಷನರ್‌ ಅನುಪಮ್‌ ಗೋಸ್ವಾಮಿ, ಹಾಲಿ ಚಾಂಪಿಯನ್‌ ತಂಡದ ನಾಯಕ ಸುನಿಲ್‌ ಕುಮಾರ್‌ (ಜೈಪುರ್‌ ಪಿಂಕ್‌ ಪ್ಯಾಂಥರ್ಸ್), ಈ ಆವೃತ್ತಿಯ ಆರಂಭಿಕ ಪಂದ್ಯದ ನಾಯಕರಾದ ಪವನ್ ಸೆಹ್ರಾವತ್ (ತೆಲುಗು ಟೈಟನ್ಸ್) ಮತ್ತು ಫಜಲ್ ಅತ್ರಾಚಲಿ (ಗುಜರಾತ್ ಜೈಂಟ್ಸ್) ಇದ್ದರು.

‘12 ನಗರಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿರುವುದು 10ನೇ ಆವೃತ್ತಿಯ ಹೆಗ್ಗುರುತಾಗಿದೆ. ಆ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಿ ಫ್ರಾಂಚೈಸಿಗಳ ಜತೆ ಕಬಡ್ಡಿ ಅಭಿಮಾನಿಗಳ ಸಂಬಂಧವನ್ನು ಗಟ್ಟಿಗೊಳಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ’ ಎಂದು ಗೋಸ್ವಾಮಿ ಹೇಳಿದರು.

ಇಂದಿನ ಪಂದ್ಯಗಳು

ತೆಲುಗು ಟೈಟನ್ಸ್– ಗುಜರಾತ್ ಜೈಂಟ್ಸ್(ರಾತ್ರಿ 8)

ಯು ಮುಂಬಾ– ಯುಪಿ ಯೋಧಾಸ್‌ (ರಾತ್ರಿ 9)

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಡಿಸ್ನಿ ಹಾಟ್‌ಸ್ಟಾರ್‌

pro kabaddi league Table 02.12.2023.pdf

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.