ಹೈದರಾಬಾದ್: ಸಂಘಟಿತ ಆಟದ ರಸದೌತಣ ಉಣಬಡಿಸಿದ ತಮಿಳ್ ತಲೈವಾಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಜಯದ ಆರಂಭ ಮಾಡಿತು.
ಇಲ್ಲಿಯ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಲೀಗ್‌ನ ಪಂದ್ಯದಲ್ಲಿ ತಲೈವಾಸ್ 44–29ರಿಂದ ತೆಲುಗು ಟೈಟನ್ಸ್ ತಂಡಕ್ಕೆ ಸೋಲುಣಿಸಿತು. ಪಂದ್ಯದ ಅರ್ಧಕ್ಕೂ ಹೆಚ್ಚು ಅವಧಿಯಲ್ಲಿ ಟೈಟನ್ಸ್ ನಾಯಕ, ಪ್ರಮುಖ ರೈಡರ್ ಪವನ್‌ಕುಮಾರ್ ಸೆಹ್ರಾವತ್ ಅವರನ್ನು ಹೊರಗುಳಿಯುವಂತೆ ಮಾಡಿದ್ದು ತಲೈವಾಸ್ ಜಯಕ್ಕೆ ಪ್ರಮುಖ ಕಾರಣವಾಯಿತು.
ಟಾಸ್ ಗೆದ್ದ ತೆಲುಗು ಟೈಟನ್ಸ್ ಅಂಗಣ ಆಯ್ಕೆ ಮಾಡಿಕೊಂಡಿತು. ಪಂದ್ಯದ ಎರಡನೇ ನಿಮಿಷದಲ್ಲೇ ಸೂಪರ್ ರೈಡ್ ಮಾಡಿದ ಪವನ್ ತಂಡಕ್ಕೆ ಎರಡು ಪಾಯಿಂಟ್ ತಂದುಕೊಟ್ಟರು. ಮುಂದಿನ ಎರಡು ನಿಮಿಷಗಳಲ್ಲಿ 5–1ರ ಮುನ್ನಡೆ ಟೈಟನ್ಸ್ ತಂಡಕ್ಕೆ ದೊರಕಿತು. ಆದರೆ ಬಳಿಕ ಸ್ಟೀಲರ್ಸ್ ಆಲ್‌ರೌಂಡ್ ಆಟದ ಬಲದಿಂದ ಆರನೇ ನಿಮಿಷದಲ್ಲೇ ಎದುರಾಳಿಯನ್ನು ಆಲೌಟ್ ಮಾಡಿ 12–8ರ ಮುನ್ನಡೆ ಕಂಡುಕೊಂಡಿತು.
10ನೇ ನಿಮಿಷದಲ್ಲಿ ತಮಿಳು 14–10ರಿಂದ ಮುಂದಿತ್ತು. ಅರ್ಧ ಅವಧಿಯ ಆಟ ಮುಗಿದಾಗ ತಲೈವಾಸ್ ಮೂರು ಪಾಯಿಂಟ್‌ನಿಂದ (20–17) ಮೇಲುಗೈ ಸಾಧಿಸಿತ್ತು.
ಸೂಪರ್ ಟೆನ್ (ತಲಾ 10 ಪಾಯಿಂಟ್) ಸಾಧಿಸಿದ ರೈಡರ್‌ಗಳಾದ ನರೇಂದರ್ ಖಂಡೋಲಾ ಮತ್ತು ಸಚಿನ್ ಅವರ ಆಟದ ಬಲದಿಂದ ತಲೈವಾಸ್ 30ನೇ ನಿಮಿಷದಲ್ಲಿ ಎದುರಾಳಿಯನ್ನು ಮತ್ತೊಮ್ಮೆ ಆಲೌಟ್ ಮಾಡಿ 31–22ರ ಮುನ್ನಡೆಯಲ್ಲಿತ್ತು.
ಈ ಹಂತದಲ್ಲಿ ಟೈಟನ್ಸ್ ಮೇಲುಗೈ ಸಾಧಿಸಲು ಹವಣಿಸುತ್ತಲೇ ಇತ್ತು. ಆದರೆ ಫಲ ಲಭಿಸಲಿಲ್ಲ.
46ನೇ ನಿಮಿಷದಲ್ಲಿ ಟೈಟನ್ಸ್ ಎದುರಾಳಿಯಿಂದ ಮತ್ತೊಮ್ಮೆ ಆಲೌಟ್ ಆಯಿತು. ಆಗ ತಲೈವಾಸ್ 40–26ರಿಂದ ಮುಂದಿತ್ತು. ಮುಂದೆ ತವರು ತಂಡ ಚೇತರಿಸಿಕೊಳ್ಳಲೇ ಇಲ್ಲ.
ಪವನ್ ಸೆಹ್ರಾವತ್ ಕೂಡ ಪಂದ್ಯದಲ್ಲಿ 10 ಪಾಯಿಂಟ್ಸ್ ಗಳಿಸಿದರು. ತಲೈವಾಸ್ ಪರ ಡಿಫೆಂಡರ್ ಸಾಹಿಲ್ ಗುಲಿಯಾ (5), ಅಭಿಷೇಕ್ (4 ಪಾಯಿಂಟ್) ಕೂಡ ಮಿಂಚಿದರು. ಟೈಟನ್ಸ್ ಪರ ಆಲ್‌ರೌಂಡರ್ ವಿಜಯ್ ಮಲಿಕ್ 9 ಪಾಯಿಂಟ್ಸ್ ಗಳಿಸಿದರು.
ಇಂದಿನ ಪಂದ್ಯಗಳು
ಬೆಂಗಾಲ್ ವಾರಿಯರ್ಸ್–ಜೈಪುರ ಪಿಂಕ್ ಪ್ಯಾಂಥರ್ಸ್: ರಾತ್ರಿ 8ರಿಂದ
ಗುಜರಾತ್ ಜೈಂಟ್ಸ್– ಬೆಂಗಳೂರು ಬುಲ್ಸ್– ರಾತ್ರಿ 9ರಿಂದ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.