ADVERTISEMENT

ಪವನ್‌ ಸಾಹಸ: ಸೆಮಿಫೈನಲ್‌ಗೆ ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 20:15 IST
Last Updated 14 ಅಕ್ಟೋಬರ್ 2019, 20:15 IST
   

ಅಹಮದಾಬಾದ್: ನಿಗದಿ ಜೊತೆಗೆ ಹೆಚ್ಚುವರಿ ಅವಧಿಯಲ್ಲಿ ಪವನ್‌ ಶೆರಾವತ್‌ ಅವರ ಅಮೋಘ ರೇಡಿಂಗ್‌ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ನ ಎಲಿಮಿನೇಷನ್‌ ಪಂದ್ಯದಲ್ಲಿ ಸೋಮವಾರ ಯು.ಪಿ.ಯೋಧಾ ತಂಡವನ್ನು 48–45 ರಿಂದ ಸೋಲಿಸಿ ಸೆಮಿಫೈನಲ್‌ ತಲುಪಿತು.

ಕಳೆದ ಬಾರಿಯ ಚಾಂಪಿಯನ್ನರಾದ ಬುಲ್ಸ್‌, ಸೆಮಿಫೈನಲ್‌ನಲ್ಲಿ ದಬಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ.

ಟ್ರಾನ್ಸ್‌ ಸ್ಟೇಡಿಯಾದ ಏಕಾ ಅರೇನಾದಲ್ಲಿ ನಡೆದ ಈ ಪಂದ್ಯದಲ್ಲಿ ನಿಗದಿತ 40 ನಿಮಿಷಗಳ ಆಟದ ನಂತರ ಸ್ಕೋರ್‌ 36–36 ರಲ್ಲಿ ಸಮನಾಗಿತ್ತು. ಹೆಚ್ಚುವರಿ ಆಟದ ಮೊದಲ ಮೂರು ನಿಮಿಷಗಳ ನಂತರ ಯೋಧಾ ತಂಡ 39–38 ರಲ್ಲಿ ಒಂದು ಪಾಯಿಂಟ್‌ ಮುನ್ನಡೆ ಸಾಧಿಸಿತ್ತು. ಆದರೆ ವಿರಾಮದ ನಂತರ ಕೊನೆಯ ಮೂರು ನಿಮಿಷಗಳ ಆಟದಲ್ಲಿ 10 ಪಾಯಿಂಟ್‌ ಗಳಿಸಿ ಗೆಲುವಿನ ಸಂಭ್ರಮ ಆಚರಿಸಿತು.

ADVERTISEMENT

ಲೀಗ್‌ನಲ್ಲಿ ಬುಲ್ಸ್‌ನ ಹೆಚ್ಚಿನ ಗೆಲುವುಗಳಿಗೆ ಕಾರಣರಾದ ಪವನ್‌ ‘ನಾಲ್ಕು ಪಾಯಿಂಟರ್‌’ಗಳ ಎರಡು ರೇಡ್‌ ಸೇರಿದಂತೆ ಒಟ್ಟು 20 ಪಾಯಿಂಟ್‌ ಗಳಿಸಿ ಮತ್ತೆ ಗೆಲುವಿಗೆ ನೆರವಾದರು. ಸುಮಿತ್‌ ಆರು ಪಾಯಿಂಟ್‌ ಗಳಿಸಿದರೆ, ಮಹೇಂದರ್‌ ಟ್ಯಾಕ್ಲಿಂಗ್‌ನಲ್ಲಿ ನಾಲ್ಕು ಪಾಯಿಂಟ್‌ ಪಡೆದರು. ಯೋಧಾ ಪರ ರಿಷಾಂಕ್‌ ದೇವಾಡಿಗ 11 ಮತ್ತು ಶ್ರೀಕಾಂತ್‌ ಜಾಧವ್‌ 9 ಪಾಯಿಂಟ್ಸ್‌ ಗಳಿಸಿದರು.

ಹೆಚ್ಚುವರಿ ಅವಧಿಯಲ್ಲಿ ಕೊನೆಯ ಮೂರು ನಿಮಿಷಗಳಿದ್ದಾಗ ಯೋಧಾ 40–39ರಲ್ಲಿ ಮುಂದಿತ್ತು. ಈ ಹಂತದಲ್ಲಿ ಪವನ್‌ ಸೂಪರ್‌ ರೇಡ್‌ನಲ್ಲಿ ನಾಲ್ಕು ಪಾಯಿಂಟ್‌ ಗಳಿಸಿ ಬುಲ್ಸ್‌ ತಂಡಕ್ಕೆ 43–40 ಲೀಡ್‌ ಒದಗಿಸಿದರು.

ಕೊನೆಯ ಎರಡು ನಿಮಿಷಗಳಿದ್ದಾಗ ಮೂರು ಪಾಯಿಂಟ್‌ ಸಹಿತ ಎದುರಾಳಿಯನ್ನು ಆಲೌಟ್‌ ಮಾಡಿದ್ದರಿಂದ ಬುಲ್ಸ್‌ 47–42 ಮುನ್ನಡೆ ಸಾಧಿಸಿ ಗೆಲುವನ್ನು ಹೆಚ್ಚುಕಮ್ಮಿ ಖಚಿತಪಡಿಸಿಕೊಂಡಿತು.

ಇದಕ್ಕೆ ಮೊದಲು ಪಂದ್ಯದಲ್ಲಿ ಉತ್ತಮ ಆರಂಭ ಮಾಡಿದ ಯೋಧಾ ಏಳನೇ ನಿಮಿಷವೇ ಎದುರಾಳಿಯನ್ನು ಆಲೌಟ್‌ ಮಾಡಿ 11–4ರಲ್ಲಿ ಉತ್ತಮ ಮುನ್ನಡೆ ಪಡೆದಿತ್ತು. ಅಶು ಸಿಂಗ್‌, ಪವನ್‌ ಅವರನ್ನು ಎರಡು ಬಾರಿ ಟ್ಯಾಕಲ್‌ ಮಾಡಿದರು.

ಆದರೆ ಆರಂಭದ ಪರದಾಟದ ಆಟಕ್ಕೆ ಕುದುರಿಕೊಂಡ ಪವನ್‌ ಸೂಪರ್‌ರೈಡ್‌ ಮೂಲಕ ತಂಡದ ಪ್ರತಿಹೋರಾಟಕ್ಕೆ ನೆರವಾದರು. 14ನೇ ನಿಮಿಷ ಸೂಪರ್‌ರೇಡ್‌ನಲ್ಲಿ ಮೂರು ಪಾಯಿಂಟ್‌ ಗಳಿಸಿದ ಅವರು ಈ ಆವೃತ್ತಿಯಲ್ಲಿ 250 ಟಚ್‌ ಪಾಯಿಂಟ್‌ ಪೂರೈಸಿದರು. ಒಂದು ನಿಮಿಷದ ನಂತರ ಸಚಿನ್‌ ಅವರನ್ನು ಟಚ್‌ ಮಾಡಿ ಹಿಂತಿರುಗುವ ಮೂಲಕ ಒಟ್ಟಾರೆ ಪ್ರೊ ಲೀಗ್‌ನಲ್ಲಿ 650 ಪಾಯಿಂಟ್‌ ಕಲೆಹಾಕಿದ ಸಾಧನೆಗೆ ಪಾತ್ರರಾದರು. ವಿರಾಮದ ವೇಳೆ ಸ್ಕೋರ್‌ 20–17ರಲ್ಲಿ ಮುಂದಿತ್ತು. ಉತ್ತರಾರ್ಧದಲ್ಲೂ ಶ್ರೀಕಾಂತ್‌ ಮತ್ತು ರಿಷಾಂಕ್‌ ಅವರ ಆಟದಿಂದ ಬಹುಪಾಲು ಅವಧಿಯಲ್ಲಿ ಮುನ್ನಡೆ ಪಡೆದಿತ್ತು. ನಾಲ್ಕು ನಿಮಿಷಗಳಿದ್ದಾಗ ಸೂಪರ್‌ ಟೆನ್‌ ಸಾಧಿಸಿದ ಪವನ್‌ ಹಿನ್ನಡೆಯನ್ನು 33–34ಕ್ಕೆ ಇಳಿಸಿದರು. ಮರು ರೇಡ್‌ನಲ್ಲಿ ಶ್ರೀಕಾಂತ್‌ ಜಾಧವ್‌ ಅವರನ್ನು ಸೌರಬ್‌ ನಂದಲ್‌ ಹಿಡಿದಾಗ ಸ್ಕೋರ್‌ ಮೊದಲ ಬಾರಿ 34–34ರಲ್ಲಿ ಸಮನಾಯಿತು. ಕೊನೆಯ ಅರ್ಧ ನಿಮಿಷವಿದ್ದಾಗ 36–35ರಲ್ಲಿ ಬುಲ್ಸ್‌ ಮುಂದಿತ್ತು. ಸುರೇಂದರ್‌ ಗಿಲ್‌ ಕೊನೆಯ ರೇಡ್‌ನಲ್ಲಿ ಪಾಯಿಂಟ್‌ ಗಳಿಸಿದ್ದರಿಂದ ಸ್ಕೋರ್‌ ಸಮಬಲಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.