ಕೊಚ್ಚಿ: ಪ್ರೊ ಕಬಡ್ಡಿ ಲೀಗ್ ಆರನೇ ಆವೃತ್ತಿಯ ‘ಪ್ಲೇ ಆಫ್’ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ದೇವರ ನಾಡಿನಲ್ಲಿ ಅದೃಷ್ಟ ಯಾವ ತಂಡಗಳ ಕೈ ಹಿಡಿಯಲಿದೆ ಎಂಬ ಕುತೂಹಲ ಈಗ ಗರಿಗೆದರಿದೆ.
ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಎಲಿಮಿನೇಟರ್ ಹೋರಾಟದಲ್ಲಿ ಯು ಮುಂಬಾ ಮತ್ತು ಯು.ಪಿ.ಯೋಧಾ ಎದುರಾಗಲಿವೆ.
ಎರಡನೇ ಎಲಿಮಿನೇಟರ್‌ನಲ್ಲಿ ದಬಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ಹೋರಾಡಲಿವೆ.
ಈ ಪಂದ್ಯಗಳಲ್ಲಿ ಗೆದ್ದವರು ಮೂರನೇ ಎಲಿಮಿನೇಟರ್‌ಗೆ ಅರ್ಹತೆ ಗಳಿಸಲಿದ್ದಾರೆ. ಸೋತವರು ಟೂರ್ನಿಯಿಂದ ಹೊರ ಬೀಳಲಿದ್ದಾರೆ. ಹೀಗಾಗಿ ಭಾನುವಾರದ ಪಂದ್ಯಗಳು ನಾಲ್ಕು ತಂಡಗಳ ಪಾಲಿಗೂ ಮಹತ್ವದ್ದೆನಿಸಿವೆ.
ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಮುಂಬಾ ತಂಡ ಈ ಬಾರಿ ಅಮೋಘ ಆಟದ ಮೂಲಕ ಗಮನ ಸೆಳೆದಿದೆ. ‘ಎ’ ವಲಯದ ಪಾಯಿಂಟ್ಸ್ ಪಟ್ಟಿಯಲ್ಲಿ ಈ ತಂಡ ಎರಡನೇ ಸ್ಥಾನ ಗಳಿಸಿತ್ತು. 22 ಪಂದ್ಯಗಳ ಪೈಕಿ 15ರಲ್ಲಿ ಗೆದ್ದಿತ್ತು.
ಫಜಲ್ ಅತ್ರಾಚಲಿ ಸಾರಥ್ಯದ ಈ ತಂಡ ರಕ್ಷಣಾ ವಿಭಾಗದಲ್ಲಿ ಶಕ್ತಿಯುತವಾಗಿದೆ. ಈ ಬಾರಿಯ ಲೀಗ್‌ನಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್ಸ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಅತ್ರಾಚಲಿ ಬಳಗ ಅಗ್ರಸ್ಥಾನ ಹೊಂದಿರುವುದು ಇದಕ್ಕೆ ಸಾಕ್ಷಿ. ಈ ತಂಡ ಒಟ್ಟು 278 ಪಾಯಿಂಟ್ಸ್ ಗಳಿಸಿದೆ.
ಲೀಗ್ ಹಂತದಲ್ಲಿ ಒಟ್ಟು 827 ಪಾಯಿಂಟ್ಸ್ ಕಲೆಹಾಕಿರುವುದೂ ಈ ತಂಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.
ಅತ್ರಾಚಲಿ, ಕರ್ನಾಟಕದ ರಾಜಗುರು, ಸುರೇಂದರ್ ಸಿಂಗ್ ಮತ್ತು ಹಾದಿ ತಾಜಿಕ್ ಅವರು ಎದುರಾಳಿ ರೇಡರ್‌ಗಳನ್ನು ಸುಲಭವಾಗಿ ರಕ್ಷಣಾ ಬಲೆಯೊಳಗೆ ಬಂದಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ರೇಡರ್‌ಗಳಾದ ಅಭಿಷೇಕ್ ಸಿಂಗ್, ಅಬೋಲ್‌ಫಜಲ್, ದರ್ಶನ್ ಕಡಿಯಾನ್ ಅವರ ಬಲವೂ ಈ ತಂಡಕ್ಕಿದೆ.
ರಿಷಾಂಕ್ ದೇವಾಡಿಗ ನೇತೃತ್ವದ ಯೋಧಾ ಕೂಡಾ ಗೆಲುವಿನ ಛಲದಲ್ಲಿದೆ. ಈ ತಂಡ ಅನಿರೀಕ್ಷಿತವಾಗಿ ‘ಪ್ಲೇ ಆಫ್’ ಪ್ರವೇಶಿಸಿದೆ.
ಕನ್ನಡಿಗರಾದ ರಿಷಾಂಕ್ ಮತ್ತು ಪ್ರಶಾಂತ್ ಕುಮಾರ್ ರೈ ಅವರು ರೇಡಿಂಗ್‌ನಲ್ಲಿ ಮೋಡಿ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಭಾನು ಪ್ರತಾಪ್ ತೋಮರ್, ಮೊಹಮ್ಮದ್ ಮಸೂದ್ ಕರೀಂ, ಶ್ರೀಕಾಂತ್ ಜಾಧವ್ ಮತ್ತು ರೋಹಿತ್ ಕುಮಾರ್ ಚೌಧರಿ ಅವರೂ ಮಿಂಚಬಲ್ಲರು. ರಕ್ಷಣಾ ವಿಭಾಗದಲ್ಲಿ ತಂಡ ಪರಿಣಾಮಕಾರಿ ಆಟ ಆಡಿದರೆ ರಿಷಾಂಕ್ ಪಡೆಗೆ ಗೆಲುವು ಕಷ್ಟವಾಗಲಾರದು.
ವಿಶ್ವಾಸದಲ್ಲಿ ಬೆಂಗಾಲ್: ಬೆಂಗಾಲ್ ವಾರಿಯರ್ಸ್ ಕೂಡಾ ಜಯದ ಮಂತ್ರ ಜಪಿಸುತ್ತಿದೆ. ಈ ತಂಡಕ್ಕೆ ಜೋಗಿಂದರ್ ಸಿಂಗ್ ನರ್ವಾಲ್ ಮುಂದಾಳತ್ವದ ದಬಂಗ್ ಡೆಲ್ಲಿಯಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ನಾಯಕ ಸುರ್ಜಿತ್ ಸಿಂಗ್, ಅಮಿತ್ ಕುಮಾರ್, ಮಣಿಂದರ್ ಸಿಂಗ್, ಜಾಂಗ್ ಕುನ್ ಲೀ, ರಾಕೇಶ್ ನರ್ವಾಲ್ ಅವರಂತಹ ಪ್ರತಿಭಾನ್ವಿತರು ಬೆಂಗಾಲ್ ತಂಡದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.