ಬೆಂಗಳೂರು: ರೋಚಕತೆಯ ತುತ್ತತುದಿ ತಲುಪಿದ್ದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿತೆಲುಗುಟೈಟನ್ಸ್ ವಿರುದ್ಧ ಜಯಿಸಿತು.
ಮಿಂಚಿನ ದಾಳಿ ನಡೆಸಿದ ಮೋಹಿತ್ ಗೋಯತ್ ಹಾಗೂ ನಾಯಕ ಫಜಲ್ ಅತ್ರಾಚಲಿ ಅವರ ರಕ್ಷಣಾತ್ಮಕ ಆಟದ ಬಲದಿಂದ ಪುಣೇರಿ ತಂಡವು 26–25ರಿಂದ ಟೈಟನ್ ವಿರುದ್ಧ ಗೆದ್ದಿತು.
ಪಂದ್ಯದ ಆರಂಭದಿಂದಲೂ ಪಂದ್ಯ ಕುತೂಹಲ ಕೆರಳಿಸಿತ್ತು. ಪ್ರಥಮಾರ್ಧದ ವಿರಾಮದ ಕಾಲಕ್ಕೆ ಪುಣೇರಿ ತಂಡವು 10–9ರ ಮುನ್ನಡೆಯಲಿತ್ತು. ವಿರಾಮದ ನಂತರದ ಆಟದಲ್ಲಿ ಉಭಯ ತಂಡಗಳ ಹೋರಾಟ ಸಮಬಲದ್ದಾಗಿತ್ತು. ಕ್ಷಣಕ್ಷಣಕ್ಕೂ ಪಂದ್ಯ ಕುತೂಹಲ ಕೆರಳಿಸಿತ್ತು. ಈ ಅವಧಿಯಲ್ಲಿ 15–15ರ ಸಮಬಲವಾಯಿತು. ಆದರೆ ಮೊದಲಾರ್ಧದಲ್ಲಿ ಪುಣೇರಿ ಗಳಿಸಿದ ಒಂದಂಕದ ಅಂತರ ಗೆಲುವಿಗೆ ಕಾರಣವಾಯಿತು.
ಟೈಟನ್ಸ್ ತಂಡದ ರೇಡರ್ ವಿನಯ್ (6) ಹಾಗೂ ಸಿದ್ಧಾರ್ಥ್ ದೇಸಾಯಿ (8) ಮಿಂಚಿದರು.
ದಿನದ ಇನ್ನೊಂದು ಪಂದ್ಯದಲ್ಲಿಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವು 39–24ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಗಳಿಸಿತು.
ಅರ್ಜುನ್ ದೇಶ್ವಾಲ್ ಹತ್ತು ಅಂಕ ಗಳಿಸಿ ಜೈಪುರ ತಂಡಕ್ಕೆ ಗೆಲುವಿನ ಹಾದಿ ತೋರಿದರು. ಡಿಫೆಂಡರ್ ಕೂಡ ಆಗಿರುವ ತಂಡದ ನಾಯಕ ಸುನಿಲ್ ಕುಮಾರ್ ನಾಲ್ಕು ಅಂಕ ಗಳಿಸಿದರು. ಆದರೆ, ಒರಟು ಆಟ ಪ್ರದರ್ಶಿಸಿ ಹಸಿರು ಕಾರ್ಡ್ ದರ್ಶನ ಮಾಡಿದರು. ಲೆಫ್ಟ್ ಕಾರ್ನರ್‌ನಲ್ಲಿ ಚೆನ್ನಾಗಿ ಆಡುತ್ತಿದ್ದ ಅಂಕುಶ್ ಕೂಡ ಐದಂಕ ಗಳಿಸಿದರೂ, ಒರಟಾಟಕ್ಕೆ ಹಸಿರು ಕಾರ್ಡ್ ಪಡೆಯಬೇಕಾಯಿತು.
ಬೆಂಗಾಲ್ ಪರವಾಗಿ ಶ್ರೀಕಾಂತ್ ಜಾಧವ್ ರೇಡಿಂಗ್‌ನಲ್ಲಿ ಆರು, ದೀಪಕ್ ಹೂಡಾ ಮೂರು ಅಂಕಗಳನ್ನು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.