ADVERTISEMENT

ಪ್ರೊ. ಕಬಡ್ಡಿ: ಪೈರೇಟ್ಸ್‌ಗೆ ರೋಚಕ ಗೆಲುವು

ಸಚಿನ್‌, ಸುಧಾಕರ್ ‘ಸೂಪರ್ ಟೆನ್‌‘ ಸಾಧನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 18:29 IST
Last Updated 5 ಫೆಬ್ರುವರಿ 2024, 18:29 IST
<div class="paragraphs"><p>ಪ್ರೊ ಕಬಡ್ಡಿ</p></div>

ಪ್ರೊ ಕಬಡ್ಡಿ

   

ನವದೆಹಲಿ: ಸಚಿನ್ ಹಾಗೂ ಸುಧಾಕರ್ ಅವರ ‘ಸೂಪರ್ ಟೆನ್‌’ ಸಾಧನೆ ನೆರವಿನಿಂದ ಪಟ್ನಾ ಪೈರೇಟ್ಸ್ ತಂಡವು ಸೋಮವಾರ ಪ್ರೊ ಕಬಡ್ಡಿ ಟೂರ್ನಿಯಲ್ಲಿ 36–33 ರಿಂದ ಹಾಲಿ ಚಾಂಪಿಯನ್‌ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿತು. 

ಇಲ್ಲಿನ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮಧ್ಯಂತರ ವೇಳೆಗೆ 14–18 ರಿಂದ ಹಿನ್ನಡೆಯಲ್ಲಿದ್ದ ಪೈರೇಟ್ಸ್ ತಂಡವು ನಂತರ ಸಾಂಘಿಕ ಆಟವಾಡಿ ಗೆಲುವು ದಾಖಲಿಸಿತು.

ADVERTISEMENT

ರೈಡಿಂಗ್‌ನಲ್ಲಿ ಸಚಿನ್ ಮತ್ತು ಸುಧಾಕರ್ ಕ್ರಮವಾಗಿ 10 ಮತ್ತು 8 ಅಂಕ ಪಡೆದು ಮಿಂಚಿದರೆ, ಟ್ಯಾಕಲ್‌ನಲ್ಲಿ ಕೃಷ್ಣ ಅವರು 5 ಪಾಯಿಂಟ್ಸ್‌ ಕಲೆ ಹಾಕಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಪ್ಯಾಂಥರ್ಸ್‌ ಪರ ಪ್ರಮುಖ ರೈಡರ್‌ ಅರ್ಜುನ್ ದೇಶ್ವಾಲ್ ಅವರು ಹೋರಾಟ ತೋರಿ 9 ರೈಡಿಂಗ್ ಪಾಯಿಂಟ್ಸ್ ಸಹಿತ 12 ಅಂಕ ಗಳಿಸಿದರೂ, ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಇತರ ಆಟಗಾರರಿಂದ ಅವರಿಗೆ ಉತ್ತಮ ಬೆಂಬಲ ದೊರೆಯಲಿಲ್ಲ. ಭವಾನಿ ರಜಪೂತ್ ಮತ್ತು ಶೌಲ್ ಕುಮಾರ್ ತಲಾ 4 ಪಾಯಿಂಟ್ಸ್ ಗಳಿಸಲಷ್ಟೇ ಶಕ್ತರಾದರು. 

ಪ್ಯಾಂಥರ್ಸ್‌ ಎರಡು ಬಾರಿ ಹಾಗೂ ಪೈರೇಟ್ಸ್‌ ಒಂದು ಬಾರಿ ಆಲೌಟ್ ಆಗಿದ್ದವು. 72 ಪಾಯಿಂಟ್ಸ್‌ಗಳೊಂದಿಗೆ ಪ್ಯಾಂಥರ್ಸ್‌ ಅಗ್ರಸ್ಥಾನದಲ್ಲಿದ್ದರೆ, 58 ಅಂಕದೊಂದಿಗೆ ಪೈರೇಟ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. 

ದಿನದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟನ್ ನಡುವಿನ ಪಂದ್ಯವು ರೋಚಕ ಟೈ ಆಯಿತು. ಉಭಯ ತಂಡಗಳು 30–30 ಸಮಬಲ ಸಾಧನೆ ಮಾಡಿದವು. ಪುಣೇರಿ ಪರ ಅಸ್ಲಾಂ 10 ಪಾಯಿಂಟ್ಸ್ ಕಲೆ ಹಾಕಿದರೆ, ದಬಾಂಗ್‌ ತಂಡದ ಪರ ಅಶು ಮಲ್ಲಿಕ್ 8 ಅಂಕ ಸಂಪಾದಿಸಿದರು.

ಇಂದಿನ ಪಂದ್ಯ: ತಮಿಳ್ ತಲೈವಾಸ್–ಯು.ಪಿ.ಯೋಧಾಸ್, ರಾತ್ರಿ 8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.