ಬೆಂಗಳೂರು: ನಾಯಕ ಮಣಿಂದರ್ ಸಿಂಗ್ ಅವರ ಉತ್ತಮ ರೈಡಿಂಗ್ ಬಲದಿಂದ ಬೆಂಗಾಲ್ ವಾರಿಯರ್ಸ್ ತಂಡ, ಭಾನುವಾರ ಪ್ರೊ ಲೀಗ್‌ನ ಪಂದ್ಯದಲ್ಲಿ 48–38ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು.
ಇದು ವಾರಿಯರ್ಸ್ ತಂಡಕ್ಕೆ ಎರಡನೇ ಗೆಲುವು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ವಿರಾಮದ ವೇಳೆಗೆ 27–21 ರಲ್ಲಿ ಮುನ್ನಡೆಯಲ್ಲಿದ್ದ ವಾರಿಯರ್ಸ್ ತಂಡ ಉತ್ತರಾರ್ಧದಲ್ಲೂ ಉತ್ತಮ ಪ್ರದರ್ಶನ ತೋರಿತು. ಮಣಿಂದರ್ ಸಿಂಗ್ ತಮ್ಮ ತಂಡಕ್ಕೆ 16 ಪಾಯಿಂಟ್ಸ್ ಗಳಿಸಿಕೊಟ್ಟರು. ಅದರಲ್ಲಿ 13 ರೈಡ್‌ನಿಂದಲೇ ಬಂತು. ಮತ್ತೊಬ್ಬ ಆಟಗಾರ ಶುಭಂ ಶಿಂಧೆ ಅವರು 11 ಅಂಕಗಳನ್ನು ಸಂಪಾದಿಸಿದರು. ಪಂದ್ಯದ ಕೊನೆ ಕೆಲವು ನಿಮಿಷಗಳಲ್ಲಿ ವಾರಿಯರ್ಸ್ ತಂಡದ ಮುನ್ನಡೆ ಹೆಚ್ಚುತ್ತಾ ಹೋಯಿತು.
ವಾರಿಯರ್ಸ್ ಎರಡು ಬಾರಿ ಹಾಗೂ ತಲೈವಾಸ್ ಮೂರು ಬಾರಿ ಆಲೌಟ್ ಆಯಿತು. ತಲೈವಾಸ್ ತಂಡದ ನರೇಂದ್ರ ಹೋಶಿಯಾರ್ ಅವರು ಉತ್ತಮ ಪ್ರದರ್ಶನ ನೀಡಿ 13 ಪಾಯಿಂಟ್ಸ್ ಕಲೆ ಹಾಕಿದರು. ಇದರಲ್ಲಿ 9 ರೈಡ್‌ನಿಂದ ಬಂತು. ಅಜಿಂಕ್ಯ ಪವಾರ್ ಅವರು 8 ಪಾಯಿಂಟ್ ಗಳಿಸಿದರು.
ಅಹಮದಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಲೈವಾಸ್ ತಂಡವು ದಂಬಾಗ್ ಡೆಲ್ಲಿ ವಿರುದ್ಧ 42–31ರಿಂದ ಗೆಲುವು ಸಾಧಿಸಿತ್ತು. ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳ ನಡುವೆ ಶುಕ್ರವಾರ ನಡೆದ ಪಂದ್ಯ 28–28ರಲ್ಲಿ ಸಮಬಲಗೊಂಡಿತ್ತು. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಬೆಂಗಾಲ್ ವಾರಿಯರ್ಸ್ ತಂಡವು 32–30 ರಿಂದ ಸೋಲಿಸಿತ್ತು.
ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು 35–33 ಪಾಯಿಂಟ್ಸ್‌ಗಳಿಂದ ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸಿತು. ರೈಡರ್‌ಗಳಾದ ಸಿದ್ಧಾರ್ಥ್ ದೇಸಾಯಿ 10, ಆಶಿಷ್ 7 ಪಾಯಿಂಟ್ಸ್ ಗಳಿಸಿ ಸ್ಟೀಲರ್ಸ್ ಗೆಲುವಿನಲ್ಲಿ ಮಿಂಚಿದರು. ದಂಬಾಗ್ ತಂಡದ ನವೀನ್ ಕುಮಾರ್ 16 ಪಾಯಿಂಟ್ಸ್ ಕಲೆ ಹಾಕಿದರು.
ಇಂದಿನ ಪಂದ್ಯಗಳು
ಜೈಪುರ ಪಿಂಕ್ ಪ್ಯಾಂಥರ್ಸ್ –ಗುಜರಾತ್ ಜೈಂಟ್ಸ್ (ರಾತ್ರಿ 8)
ಬೆಂಗಳೂರು ಬುಲ್ಸ್–ಯುಪಿ ಯೋಧಾಸ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.