ADVERTISEMENT

ಪ್ರೊ ಕಬಡ್ಡಿ: ದಬಾಂಗ್‌ಗೆ ಮಣಿದ ವಾರಿಯರ್ಸ್‌

ಸಾವಿರ ಪಾಯಿಂಟ್‌ ಸಂಗ್ರಹಿಸಿದ ಅನುಭವಿ ರೈಡರ್‌ ನವೀನ್ ಕುಮಾರ್‌

ಪಿಟಿಐ
Published 25 ಡಿಸೆಂಬರ್ 2023, 19:11 IST
Last Updated 25 ಡಿಸೆಂಬರ್ 2023, 19:11 IST
<div class="paragraphs"><p> ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡದ ರೈಡರ್‌ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಪಾಯಿಂಟ್‌ ಗಳಿಸಲು ಯತ್ನಿಸಿದ ಕ್ಷಣ</p></div>

ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡದ ರೈಡರ್‌ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಪಾಯಿಂಟ್‌ ಗಳಿಸಲು ಯತ್ನಿಸಿದ ಕ್ಷಣ

   

ಚೆನ್ನೈ : ಅನುಭವಿ ರೈಡರ್‌, ನಾಯಕ ನವೀನ್ ಕುಮಾರ್‌ ಅವರ ಮತ್ತೊಂದು ‘ಸೂಪರ್ 10’ ನೆರವಿನಿಂದ ದಬಾಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ಒಂಬತ್ತು ಪಾಯಿಂಟ್‌ಗಳ ಗೆಲುವು ಸಾಧಿಸಿತು.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 38–29ರಿಂದ ವಾರಿಯರ್ಸ್ ವಿರುದ್ಧ ಜಯ ಸಾಧಿಸಿತು.

ADVERTISEMENT

ನವೀನ್‌ ಕುಮಾರ್‌  ಅವರು 11 ಅಂಕಗಳನ್ನು ಗಳಿಸಿದರು. ಸಹ ಆಟಗಾರರಾದ ಯೋಗೇಶ್ ಮತ್ತು ಆಶಿಶ್‌ ಮಲಿಕ್‌ ಟ್ಯಾಕಲ್‌ನಲ್ಲಿ ಒಟ್ಟು ಹತ್ತು ಅಂಕ ಗಳಿಸಿದರು. ಈ ಪಂದ್ಯದ ಮೂಲಕ ನವೀನ್‌ ಕುಮಾರ್‌ ಪ್ರೊ ಕಬಡ್ಡಿ ಲೀಗ್‌ನಲ್ಲಿ 1000 ರೈಡ್‌ ಪಾಯಿಂಟ್‌ಗಳ ಮೈಲಿಗಲ್ಲನ್ನು ದಾಟಿದರು. 

ಪಂದ್ಯ ಆರಂಭಗೊಂಡ ಮೂರನೇ ನಿಮಿಷದಲ್ಲಿ ನವೀನ್ ಮತ್ತು ಅಶು ಮಲಿಕ್ ಅವರ ಉತ್ತಮ ರೈಡಿಂಗ್‌ ಬಲದಿಂದ ದಬಾಂಗ್ ಡೆಲ್ಲಿ 3-0 ಮುನ್ನಡೆ ಸಾಧಿಸಿತು. ಇದಾದ ಕೆಲವೇ ಕ್ಷಣಗಳಲ್ಲಿ ಶ್ರೀಕಾಂತ್ ಜಾಧವ್ ಅವರ ಉತ್ತಮ ಟ್ಯಾಕಲ್ ಮೂಲಕ 9-2 ಮುನ್ನಡೆ ಸಾಧಿಸಿಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.

ವಾರಿಯರ್ಸ್ ಪರ ಮಣಿಂದರ್ ಸಿಂಗ್ ಎರಡು ಅಂಕಗಳನ್ನು ಗಳಿಸಿದರು. ಆದರೆ ಒಂಬತ್ತನೇ ನಿಮಿಷದಲ್ಲಿ ಡೆಲ್ಲಿ 10-5 ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ವಿರಾಮಕ್ಕೆ ಸ್ವಲ್ಪ ಮೊದಲು ವಾರಿಯರ್ಸ್‌ 'ಆಲ್ ಔಟ್' ಆಯಿತು. 

ಮೊದಲಾರ್ಧದಲ್ಲಿ ದಬಾಂಗ್ ಡೆಲ್ಲಿ 23-16 ಅಂಕಗಳ ಮುನ್ನಡೆ ಸಾಧಿಸಿತ್ತು. ವಿರಾಮದ ನಂತರ, ಡಿಫೆಂಡರ್‌ ಮಣಿಂದರ್ ಮತ್ತು ಶ್ರೀಕಾಂತ್ ಅವರು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ 27-18 ರಲ್ಲಿ ಭಾರಿ ಮುನ್ನಡೆ ಸಾಧಿಸಲು ನೆರವಾದರು. ಇದಾದ ಕೆಲವೇ ಕ್ಷಣಗಳಲ್ಲಿ ನವೀನ್  1000ನೇ ರೈಡ್ ಪಾಯಿಂಟ್ ದಾಖಲಿಸಿದರು.

ವಾರಿಯರ್ಸ್ ಪರ ನಿತಿನ್ ಕುಮಾರ್ 9, ಮಣಿಂದರ್ ಸಿಂಗ್ 6, ವೈಭವ್‌ ಮತ್ತು ಶುಭಂ ತಲಾ 4 ಪಾಯಿಂಟ್ಸ್ ಸಂಗ್ರಹಿಸಿದರು. 

ಹರಿಯಾಣ ಸ್ಟೀಲರ್ಸ್‌ಗೆ ಜಯ:

ಸಾಂಘಿಕ ಆಟ ಪ್ರದರ್ಶಿಸಿದ ಹರಿಯಾಣ ಸ್ಟೀಲರ್ಸ್ ತಂಡವು ಮತ್ತೊಂದು ಪಂದ್ಯದಲ್ಲಿ 42–29ರಿಂದ ತಮಿಳ್‌ ತಲೈವಾಸ್ ತಂಡವನ್ನು ಸುಲಭವಾಗಿ ಮಣಿಸಿತು.

ಸ್ಟೀಲರ್ಸ್‌ ತಂಡದ ಶಿವಂ ಪಟಾರೆ 8, ಜೈದೀಪ್ ಮತ್ತು ರಾಹುಲ್ ಸೇತುಪಾಲ್ ತಲಾ 7 ಅಂಕ ಸಂಪಾದಿಸಿದರು. ತಲೈವಾಸ್ ಪರ ಸಾಹಿಲ್ ಸಿಂಗ್ ಸೂಪರ್ 10 ಸಾಧನೆ ಮಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಹಿಮಾಂಶು 9 ಅಂಕ ಗಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.