ADVERTISEMENT

ಬಜರಂಗ್, ವಿನೇಶಾಗೆ ನೇರ ಅರ್ಹತೆ; ಐಒಎ ಕದ ತಟ್ಟಿದ ಜೂನಿಯರ್ ಕುಸ್ತಿಪಟುಗಳು

ವಿನೇಶಾ, ಬಜರಂಗ್‌ ಟ್ರಯಲ್ಸ್‌ ವಿನಾಯಿತಿಗೆ ಹೆಚ್ಚಿದ ವಿರೋಧ; ದೆಹಲಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 22:30 IST
Last Updated 20 ಜುಲೈ 2023, 22:30 IST
ಸುಜೀತ್ ಕಲಾಕಲ್ ಮತ್ತು ಅಂತಿಮ ಪಂಘಾಲ್
ಸುಜೀತ್ ಕಲಾಕಲ್ ಮತ್ತು ಅಂತಿಮ ಪಂಘಾಲ್   

ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಭಾರತ ಕುಸ್ತಿ ತಂಡದಲ್ಲಿ ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್ ಅವರಿಗೆ ನೇರ ಅರ್ಹತೆ ಕೊಟ್ಟಿರುವುದನ್ನು ವಿರೋಧಿಸಿ ಜೂನಿಯರ್ ಕುಸ್ತಿಪಟುಗಳ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಿದೆ.

ಜೂನಿಯರ್ ಕುಸ್ತಿಪಟುಗಳು, ಅವರ ಪಾಲಕರು ಮತ್ತು ತರಬೇತುದಾರರು ಗುರುವಾರ ದೆಹಲಿಯಲ್ಲಿರುವ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಭವನಕ್ಕೆ ತೆರಳಿದರು. 150ಕ್ಕೂ ಹೆಚ್ಚು ಪ್ರತಿಭಟನಾಕಾರರು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಡ್‌ ಹಾಕ್ ಸಮಿತಿಯ ಮುಖ್ಯಸ್ಥ ಭೂಪೆಂದರ್ ಸಿಂಗ್ ಬಜ್ವಾ  ಅವರನ್ನು ಭೇಟಿಯಾದರು.

ಬುಧವಾರ ಹರಿಯಾಣದ ಹಿಸಾರ್‌ನಲ್ಲಿ ಪ್ರತಿಭಟನೆ ಆರಂಭವಾಗಿತ್ತು.

ADVERTISEMENT

‘ಐಒಎ ಮುಖ್ಯಸ್ಥರನ್ನು ಭೇಟಿಯಾಗುವುದು ನಮ್ಮ ಉದ್ದೇಶವಾಗಿತ್ತು. ಯಾವುದೇ ರೀತಿಯ ಏಕಪಕ್ಷೀಯ ತೀರ್ಮಾನಗಳನ್ನು ನಾವು ಒಪ್ಪುವುದಿಲ್ಲ. ಇದು ತಪ್ಪು. ಬಜರಂಗ್ ಮತ್ತು ವಿನೇಶಾ ಅವರಿಗೆ ಟ್ರಯಲ್ಸ್‌ನಿಂದ ನೀಡಿರುವ ವಿನಾಯಿತಿಯನ್ನು ಹಿಂಪಡೆಯಬೇಕು’  ಎಂದು ಜೂನಿಯರ್ ಕುಸ್ತಿಪಟು ಅಂತಿಮ ಪಂಘಾಲ್ ಅವರ ಕೋಚ್ ವಿಕಾಸ್ ಭಾರದ್ವಾಜ್ ಆಗ್ರಹಿಸಿದರು.

20 ವರ್ಷದೊಳಗಿನವರ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಅಂತಿಮ ಪಂಘಾಲ್ ಮತ್ತು 23 ವರ್ಷದೊಳಗಿನವರ ಚಾಂಪಿಯನ್ ಸುಜೀತ್ ಕಲಾಕಲ್ ಅವರು ಅಡ್‌ಹಾಕ್ ಸಮಿತಿಯ ತೀರ್ಮಾನವನ್ನು ಕಟುವಾಗಿ ವಿರೋಧಿಸಿದ್ದಾರೆ. ಅಲ್ಲದೇ ತಮಗೆ ಅವಕಾಶ ಕೊಟ್ಟರೆ ಬಜರಂಗ್ ಮತ್ತು ವಿನೇಶಾ ಅವರನ್ನು ಸೋಲಿಸಲೂ ಸಮರ್ಥರಾಗಿರುವುದಾಗಿ ಸವಾಲು ಹಾಕಿದ್ದಾರೆ.

‘ಪುರುಷರ ಫ್ರೀಸ್ಟೈಲ್ 65ಕೆ.ಜಿ. ಮತ್ತು ಮಹಿಳೆಯರ 53 ಕೆ.ಜಿ ವಿಭಾಗಗಳಲ್ಲಿ  ತಂಡಗಳನ್ನು ಅಂತಿಮಗೊಳಿಸಲಾಗಿದೆ. ಉಳಿದ ವಿಭಾಗಗಳ ಆಯ್ಕೆಗೆ ಟ್ರಯಲ್ಸ್ ನಡೆಸಲಾಗುವುದು‘ ಎಂದು ಬಜ್ವಾ ಅವರು ಮಂಗಳವಾರ ಪ್ರಕಟಿಸಿದ್ದರು.

ಪಂಘಾಲ್ ಮತ್ತು ಸುಜೀತ್ ಅವರು ಅಡ್‌ಹಾಕ್ ಸಮಿತಿಯ ತೀರ್ಮಾನವನ್ನು ವಿರೋಧಿಸಿ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಅನ್ಷು ಮಲಿಕ್ ಟ್ವೀಟ್

ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದ, ಕಾಮನ್‌ವೆಲ್ತ್ ಗೇಮ್ಸ್‌ ಪದಕವಿಜೇತ ಅನ್ಷು ಮಲೀಕ್ ಅವರೂ ಜೂನಿಯರ್ ಪೈಲ್ವಾನರಿಗೆ ಬೆಂಬಲ ಸೂಚಿಸಿದ್ದಾರೆ.

‘ಯಾವುದೇ ಕ್ರೀಡಾಪಟುವಿಗೂ ಒಲಿಂಪಿಕ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಪದಕ ಜಯಿಸಬೇಕೆಂಬ ಹಂಬಲ ಇದ್ದೇ ಇರುತ್ತದೆ. ದೇಶಕ್ಕೆ ಗೌರವ ಗಳಿಸಿ ಕೊಡುವ ಗುರಿ ಇರುತ್ತದೆ. ಆದರೆ ಅವರಿಂದ ಅವಕಾಶವನ್ನು ಕಸಿದುಕೊಂಡರೆ ಹೇಗೆ‘ ಎಂದು ಅನ್ಷು ಟ್ವೀಟ್ ಮಾಡಿದ್ದಾರೆ.

ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಅನ್ಷು ಸ್ಪರ್ಧಿಸುತ್ತಾರೆ.

‘ಜೂನಿಯರ್ ಪೈಲ್ವಾನರು ಟ್ರಯಲ್ಸ್‌ಗಾಗಿ ಬೇಡಿಕೆ ಇಟ್ಟಿರುವುದು ಸರಿ ಇದೆ. ಇದು ಅವರ ಹಕ್ಕು ಕೂಡ. ಅವರನ್ನು ನಾನು ಬೆಂಬಲಿಸುವೆ‘ ಎಂದು ಅನ್ಷು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.