ಹೈದರಾಬಾದ್: ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಮೇಲೆ 31–27ರಲ್ಲಿ ನಾಲ್ಕು ಪಾಯಿಂಟ್‌ಗಳ ಹೋರಾಟದ ಜಯಗಳಿಸಿದ ಹರಿಯಾಣ ಸ್ಟೀಲರ್ಸ್ ತಂಡ ಬುಧವಾರ ಪ್ರೊ ಕಬಡ್ಡಿ ಲೀಗ್ ಫೈನಲ್‌ಗೆ ದಾಪುಗಾಲಿಟ್ಟಿತು. ಶುಕ್ರವಾರ ನಡೆಯುವ ಫೈನಲ್‌ನಲ್ಲಿ ಹರಿಯಾಣ ತಂಡ, ಕಳೆದ ಸಲದ ರನ್ನರ್ ಅಪ್ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ.
ಗಚ್ಚಿಬೌಲಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಲೀಗ್‌ನ ಮೊದಲ ಸೆಮಿಫೈನಲ್‌ನಲ್ಲಿ ಪುಣೇರಿ ತಂಡ ಸ್ಫೂರ್ತಿದಾಯಕ ಪ್ರದರ್ಶನ ನೀಡಿ 37–21 ರಲ್ಲಿ 16 ಅಂಕಗಳಿಂದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಸತತ ಎರಡನೇ ಸಲ ಫೈನಲ್ ಪ್ರವೇಶಿಸಿತ್ತು.
ಟೂರ್ನಿಯುದ್ದಕ್ಕೂ ಉತ್ತಮ ರೈಡಿಂಗ್ ಪ್ರದರ್ಶಿಸಿರುವ ಜೈಪುರದ ತಂಡದ ಸ್ಟಾರ್ ರೈಡರ್ ಅರ್ಜುನ್ ದೇಶ್ವಾಲ್ 14 ಪಾಯಿಂಟ್ಸ್ ಕಲೆಹಾಕಿದರೂ, ಅವರಿಗೆ ಉಳಿದ ಆಟಗಾರರಿಂದ ಉತ್ತಮ ಬೆಂಬಲ ದೊರೆಯಲಿಲ್ಲ. ಹರಿಯಾಣದ ಪ್ರಮುಖ ರೈಡರ್ ವಿನಯ್ 11 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಅವರಿಗೆ ಲೆಫ್ಟ್ ರೈಡರ್ ಶಿವಂ ಪತಾರೆ (7 ಪಾಯಿಂಟ್ಸ್) ಅವರಿಂದ ಉತ್ತಮ ಬೆಂಬಲ ದೊರೆಯಿತು.
ಪಂದ್ಯದ ಬಹುಪಾಲು ಅವಧಿಗೆ ಹರಿಯಾಣ ತಂಡ ಮುನ್ನಡೆ ಸಾಧಿಸಿದ್ದು ವಿರಾಮದ ವೇಳೆಗೆ 19–13ರಲ್ಲಿ ಮುನ್ನಡೆ ಸಾಧಿಸಿತ್ತು.
ಪುಣೇರಿ ಮೇಲುಗೈ:
ಇದಕ್ಕೆ ಮೊದಲು ಪುಣೇರಿ ತಂಡ ಎರಡೂ ಅವಧಿಯಲ್ಲಿ ಅಧಿಕಾರಯುತ ಪ್ರದರ್ಶನ ನೀಡಿತು. ಪುಣೇರಿ ಪರ ಅಸ್ಲಂ ಮುಸ್ತಾಫಾ ಮತ್ತು ಪಂಕಜ್ ಮೋಹಿತೆ ತಲಾ ಏಳು ಅಂಕಗಳನ್ನು ಗಳಿಸಿ ರೈಡಿಂಗ್‌ನಲ್ಲಿ ಬಹುಪಾಲು ಅಂಕ ಕಲೆಹಾಕಿದರು. ಟ್ಯಾಕ್ಲಿಂಗ್‌ನಲ್ಲಿ ಇರಾನ್‌ನ ಮೊಹಮದ್ ರೇಝಾ ಚಿಯೆನ್ನಾ ಐದು ಪಾಯಿಂಟ್ಸ್ ಕಲೆಹಾಕಿದರು.
ಪುಣೇರಿ ಪಲ್ಟನ್ ವಿರಾಮದ ವೇಳೆಗೆ 9 ಪಾಯಿಂಟ್‌ಗಳ (20–11) ಮುನ್ನಡೆ ಸಾಧಿಸಿತ್ತು. ಅಸ್ಲಂ ಬಳಗ, ವಿರಾಮಕ್ಕೆ ಮೊದಲು ಮತ್ತು ನಂತರ ತಲಾ ಒಮ್ಮೆ ಎದುರಾಳಿ ಪಟ್ನಾ ತಂಡವನ್ನು ಅಲೌಟ್ ಮಾಡಿತು. ಮೂರು ಬಾರಿಯ ಚಾಂಪಿಯನ್ ಪಟ್ನಾ ಪರ ನಾಯಕ ಸಚಿನ್ (5 ಅಂಕ) ಹೋರಾಟ ತೋರಿದರೂ ಅವರಿಗೆ ಉಳಿದವರಿಂದ ಬೆಂಬಲ ದೊರೆಯಲಿಲ್ಲ.
ಮೊದಲ ಒಂಬತ್ತು ನಿಮಿಷಗಳಲ್ಲಿಇತ್ತಂಡಗಳು ಜಿದ್ದಾಜಿದ್ದಿನ ಹೋರಾಟದಲ್ಲಿ ತೊಡಗಿದವು. ಆದರೆ 11ನೇ ನಿಮಿಷದಲ್ಲಿ10-8ರಲ್ಲಿ ಮೊದಲ ಬಾರಿ ಮುನ್ನಡೆ ಸಾಧಿಸಿದ ಬಿ.ಸಿ.ರಮೇಶ್ ತರಬೇತಿಯ ಪುಣೇರಿ ತಂಡ ನಂತರ ಅದನ್ನು ಪಂದ್ಯದುದ್ದಕ್ಕೂ ಉಳಿಸಿಕೊಂಡಿತು. 16ನೇ
ನಿಮಿಷ ಪೈರೇಟ್ಸ್ ತಂಡ ಮೊದಲ ಸಲ ಆಲೌಟ್ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.