ADVERTISEMENT

ರಷ್ಯಾ ಸ್ಪರ್ಧಿಗಳಿಗೆ ನಿರ್ಬಂಧ: ಐಒಸಿ ವಿರುದ್ಧ ಪುಟಿನ್ ಕಿಡಿ

ಏಜೆನ್ಸೀಸ್
Published 14 ಡಿಸೆಂಬರ್ 2023, 16:07 IST
Last Updated 14 ಡಿಸೆಂಬರ್ 2023, 16:07 IST
ವ್ಲಾಡಿಮಿರ್‌ ಪುಟಿನ್
ವ್ಲಾಡಿಮಿರ್‌ ಪುಟಿನ್   

ಮಾಸ್ಕೊ:  ಪ್ಯಾರಿಸ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲು ತಮ್ಮ ದೇಶದ ಅಥ್ಲೀಟ್‌ಗಳ ಮೇಲೆ ನಿಬಂಧನೆಗಳನ್ನು ವಿಧಿಸುವ ಮೂಲಕ ಒಲಿಂಪಿಕ್ ಆಂದೋಲನದ ಆಶಯಕ್ಕೆ ಐಒಸಿ ಧಕ್ಕೆ ತಂದಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ ಕೂಟದಲ್ಲಿ ರಷ್ಯಾ ಮತ್ತು ಬೆಲಾರಸ್ ಅವರು ತಮ್ಮ ದೇಶಗಳ ಧ್ವಜದಡಿಯಲ್ಲಿ ಸ್ಪರ್ಧಿಸುವಂತಿಲ್ಲ. ಅವರು  ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಧ್ವಜದಡಿಯಲ್ಲಿ ಸ್ಪರ್ಧಿಸಬೇಕು ಎಂದು ನಿಬಂಧನೆ ಹಾಕಲಾಗಿದೆ. ರಷ್ಯಾ ದೇಶವು ಉಕ್ರೇನ್ ಮೇಲೆ ಯುದ್ಧ ಸಾರಿರುವುದನ್ನು ಖಂಡಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಮರ ಶುರುವಾದಾಗಿನಿಂದಲೂ ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಉಭಯ ದೇಶಗಳ ಅಥ್ಲೀಟ್‌ಗಳು ಈ ನಿಯಮದಡಿಯಲ್ಲಿ ಭಾಗವಹಿಸಿದ್ದಾರೆ.  

‘ಐಒಸಿಯ ವರ್ತನೆಯನ್ನು ಇದೇ ರೀತಿ ಮುಂದುವರಿಸಿದರೆ ಒಲಿಂಪಿಕ್ ಆಂದೋಲನ ನಾಶವಾಗುತ್ತದೆ. ನಮ್ಮ ಅಥ್ಲೀಟ್‌ಗಳನ್ನು ಪ್ಯಾರಿಸ್‌ಗೆ ಕಳಿಸುವ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಲಾಗುವುದು. ಅವರು (ಐಒಸಿ) ರಾಜಕೀಯಪ್ರೇರಿತ ನಿರ್ಧಾರಗಳ ಮೂಲಕ ನಮ್ಮ ತಂಡವನ್ನು ದುರ್ಬಲಗೊಳಿಸಲು ಯತ್ನಿಸಿದರೆ ರಷ್ಯಾ ಒಲಿಂಪಿಕ್ ಸಮಿತಿಯು ತನ್ನದೇ ಆದ ನಿರ್ಧಾರ ಕೈಗೊಳ್ಳುವತ್ತ ಚಿತ್ತ ಹರಿಸಲಿದೆ’ ಎಂದೂ ಪುಟಿನ್ ಹೇಳಿದ್ದಾರೆ.

ADVERTISEMENT

 ’ಐಒಸಿಯ ಕ್ರೀಡಾ ಅಧಿಕಾರಿಗಳು ಪಾಶ್ಚಿಮಾತ್ಯ ಗಣ್ಯರ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸುತ್ತಿದ್ದಾರೆ‘ ಎಂದು ಅವರೂ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.