ಹುವೆಲ್ವಾ, ಸ್ಪೇನ್: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ.ಸಿಂಧು ಪ್ರಶಸ್ತಿ ಉಳಿಸಿಕೊಳ್ಳುವ ಸವಾಲಿಗೆ ಸಜ್ಜಾಗಿದ್ದು, ಭಾನುವಾರ ಇಲ್ಲಿ ಆರಂಭವಾಗುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಫ್ರೆಂಚ್ ಓಪನ್, ಇಂಡೋನೇಷ್ಯಾ ಮಾಸ್ಟರ್ಸ್ ಮತ್ತು ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಸಿಂಧು, ಋತುವಿನ ಅಂತ್ಯದ ವಿಶ್ವ ಟೂರ್ ಫೈನಲ್ಸ್ ಟೂರ್ನಿಯಲ್ಲಿ ತಮ್ಮ ಎರಡನೇ ಬೆಳ್ಳಿ ಪದಕ ಜಯಿಸುವ ಮೂಲಕ ಉತ್ತಮ ಲಯದಲ್ಲಿದ್ದಾರೆ.
ಎರಡು ವರ್ಷಗಳ ಹಿಂದೆ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಹೈದರಾಬಾದ್‌ನ 26 ವರ್ಷದ ಆಟಗಾರ್ತಿ, ಅದೇ ಸಾಮರ್ಥ್ಯ ಮುಂದುವರಿಸುವ ಛಲದಲ್ಲಿದ್ದಾರೆ.
ಈ ಬಾರಿ ಇಂಡೊನೇಷ್ಯಾದ ಇಡೀ ತಂಡ ಇಲ್ಲಿ ಕಣಕ್ಕಿಳಿಯುತ್ತಿಲ್ಲ. ಅಲ್ಲದೆ ಎರಡು ಬಾರಿ ಚಿನ್ನ ವಿಜೇತ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ, ಮೂರು ಬಾರಿಯ ಮಹಿಳಾ ಚಾಂಪಿಯನ್ ಸ್ಪೇನ್‌ನ ಕರೋಲಿನಾ ಮರಿನ್ ಮತ್ತು 2017ರ ಪ್ರಶಸ್ತಿ ವಿಜೇತೆ ನೊಜೊಮಿ ಒಕುಹರಾ ಕೂಡ ಗಾಯದ ಕಾರಣ ಆಡುತ್ತಿಲ್ಲ. ಹೀಗಾಗಿ ಟೂರ್ನಿ ಹೊಳಪು ಕಳೆದುಕೊಂಡಿದೆ.
ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ, 2015ರ ಆವೃತ್ತಿಯ ಬೆಳ್ಳಿ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್ ಕೂಡ ಗಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಟೂರ್ನಿಗೆ ಲಭ್ಯರಿಲ್ಲ.
ಸಿಂಧು ಅವರು ಒಂಬತ್ತನೇ ಶ್ರೇಯಾಂಕದ ಥಾಯ್ಲೆಂಡ್ ಆಟಗಾರ್ತಿ ಪಾರ್ನ್‌ಪಾವೀ ಚೊಚುವಾಂಗ್, ಅಗ್ರ ಶ್ರೇಯಾಂಕದ ಚೀನಾ ತೈಪೆಯ ತೈ ಜು ಯಿಂಗ್ ಮತ್ತು ಕೊರಿಯಾದ ಆನ್ ಸೆಯಂಗ್ ಅವರನ್ನು ಎದುರಿಸಬೇಕಾಗಿದೆ.
ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಸಿಂಧು, ಎರಡನೇ ಸುತ್ತಿನ ಹಣಾಹಣಿಯಲ್ಲಿ ಸ್ಲೊವೇಕಿಯಾದ ಮಾರ್ಟಿನ ರೆಪಿಸ್ಕಾ ಅವರನ್ನು ಎದುರಿಸುವರು. ಈ ಪಂದ್ಯದಲ್ಲಿ ಜಯಿಸಿದರೆ ಭಾರತದ ಆಟಗಾರ್ತಿಗೆ ಪಾರ್ನ್‌ಪವೀ ಮುಖಾಮುಖಿಯಾಗುವರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 12ನೇ ಶ್ರೇಯಾಂಕದ ಕಿದಂಬಿ ಶ್ರೀಕಾಂತ್ ಅವರು ಸ್ಪೇನ್‌ನ ಪ್ಯಾಬ್ಲೊ ಅಬಿಯನ್ ಎದುರು ಅಭಿಯಾನ ಆರಂಭಿಸಲಿದ್ದಾರೆ. ಬಿ.ಸಾಯಿ ಪ್ರಣೀತ್ ಅವರು ನೆದರ್ಲೆಂಡ್ಸ್‌ನ ಮಾರ್ಕ್ ಕಾಲ್‌ಜೊ ವಿರುದ್ಧ ಆಡಲಿದ್ದಾರೆ.
ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್ ಕೂಡ ಅದೃಷ್ಟಪರೀಕ್ಷಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ, ಮಹಿಳಾ ಡಬಲ್ಸ್‌ನಲ್ಲಿ ಎನ್.ಸಿಕ್ಕಿರೆಡ್ಡಿ– ಅಶ್ವಿನಿ ಪೊನ್ನಪ್ಪ ಕಣಕ್ಕಿಳಿಯುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.