ಒಡೆನ್ಸ್, ಡೆನ್ಮಾರ್ಕ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಇಲ್ಲಿ ನಡೆದ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಮೂರು ಗೇಮ್‌ಗಳ ಹೋರಾಟದಲ್ಲಿ ಅವರು ಸ್ಪೇನ್‌ನ ಕರೊಲಿನಾ ಮರಿನ್ ಅವರಿಗೆ ಶರಣಾಗುವ ಮೊದಲು ಪೈಪೋಟಿ ನೀಡಿದರು.
ವಿಶ್ವದ 12ನೇ ಕ್ರಮಾಂಕದ ಸಿಂಧು ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ನಾಲ್ಕರ ಘಟ್ಟದ ಪಂದ್ಯದಲ್ಲಿ 18-21, 21-19, 7-21 ರಿಂದ ಆರನೇ ಕ್ರಮಾಂಕದ ಕರೊಲಿನಾ ವಿರುದ್ಧ ಪರಾಭವಗೊಂಡರು.
ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಸಿಂಧು ನಂತರ ಪುಟಿದೆದ್ದು ಎರಡನೇ ಗೇಮ್‌ನಲ್ಲಿ ಪಾರಮ್ಯ ಮೆರೆದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಬಿಗಿಹಿಡಿತ ಸಾಧಿಸಿದ ಕರೊಲಿನಾ ಫೈನಲ್‌ಗೆ ಲಗ್ಗೆಯಿಟ್ಟರು.
ಒಂದು ಗಂಟೆ 13 ನಿಮಿಷಗಳ ಕಾಲ ನಡೆದ ಪಂದ್ಯದ ವೇಳೆ ಉಭಯ ಆಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೀಗಾಗಿ, ಅಂಪೈರ್ ಇಬ್ಬರಿಗೂ ಹಳದಿ ಕಾರ್ಡ್ ತೋರಿಸಿ ಎಚ್ಚರಿಕೆ ನೀಡಿದರು.
2016ರ ರಿಯೊ ಒಲಿಂಪಿಕ್ಸ್ ಫೈನಲ್ ಮತ್ತು 2018ರ ವಿಶ್ವ ಚಾಂಪಿಯನ್‌ಷಿಪ್‌ನ ಪಂದ್ಯ ಸೇರಿದಂತೆ ಸಿಂಧು ಅವರಿಗೆ ಮರಿನ್ ವಿರುದ್ಧ ಇದು ಐದನೇ ಸೋಲಾಗಿದೆ.
ಸಿಂಧು ಅವರು ಕಳೆದ ವಾರ ನಡೆದಿದ್ದ ಆರ್ಕಟಿಕ್ ಓಪನ್ ಟೂರ್ನಿಯಲ್ಲೂ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.