ADVERTISEMENT

PV Web Exclusive ನೀರಜ್ ಚೋಪ್ರಾ ಸಿದ್ಧತೆ, ಬದ್ಧತೆ, ಸಮಚಿತ್ತದ ಮುಂದಿದೆ ಸವಾಲು

ಗಿರೀಶದೊಡ್ಡಮನಿ
Published 12 ಆಗಸ್ಟ್ 2021, 7:14 IST
Last Updated 12 ಆಗಸ್ಟ್ 2021, 7:14 IST
ನೀರಜ್ ಚೋಪ್ರಾ ಸಂಭ್ರಮದ ಕ್ಷಣಗಳು  –ಪಿಟಿಐ ಚಿತ್ರ
ನೀರಜ್ ಚೋಪ್ರಾ ಸಂಭ್ರಮದ ಕ್ಷಣಗಳು  –ಪಿಟಿಐ ಚಿತ್ರ   

ಟೋಕಿಯೊದಲ್ಲಿ ಅವತ್ತು ತಾವು ಎಸೆದ ಜಾವೆಲಿನ್ ಭೂಸ್ಪರ್ಷ ಮಾಡಲು ಇನ್ನೂ ಬಹಳಷ್ಟು ದೂರವಿದ್ದಾಗಲೇನೀರಜ್ ಚೋಪ್ರಾ ಸಂಭ್ರಮ ಆಚರಿಸಿಯಾಗಿತ್ತು. ತಮ್ಮ ಬಾಹುಬಲದ ಮೇಲೆ ಮತ್ತು ನಿಖರತೆಯ ಕುರಿತು ಅವರಿಗಿದ್ದ ವಿಶ್ವಾಸದ ಪ್ರತೀಕ ಅದು.

ತಮ್ಮ ಎರಡನೇ ಎಸೆತದಲ್ಲಿಯೇ ಶ್ರೇಷ್ಠ ಸಾಧನೆ ಮಾಡಿ ಪದಕ ಜಯಿಸುವುದು ಖಚಿತ ಎಂಬುದನ್ನು ಅವರು ಅರಿತಿದ್ದರು. ಇದು ಅವರು ಕಠಿಣ ಪರಿಶ್ರಮದಿಂದ ಮಾಡಿದ ಸಿದ್ಧತೆ ಮತ್ತು ಸಾಧನೆಯ ಗುರಿಯ ಬಗ್ಗೆ ಇರುವ ಬದ್ಧತೆಯ ಪ್ರತೀಕವಾಗಿ ಅವರ ಸಂಭ್ರಮಾಚರಣೆ ಕಂಡಿತ್ತು. ಒಂದೊಮ್ಮೆ ಸ್ಪರ್ಧೆ ಮುಗಿದು, ಚಿನ್ನದ ಪದಕ ಜಯಿಸಿದ ನಂತರ ಅವರು ತೋರುತ್ತಿರುವ ಸಮಚಿತ್ತದ ನಡವಳಿಕೆ ಕೂಡ ಗಮನ ಸೆಳೆಯುತ್ತಿದೆ.

‘ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರು ನಿಮ್ಮನ್ನು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋ ಮಾಡ್ತಾ ಇದ್ದಾರೆ? ಈಗಾಗಲೇ ನಿಮಗೆ ಗೆಳತಿ ಇದ್ದಾಳಾ? ಏನು ಹೆಸರು?’ ಎಂದು ಮಾಧ್ಯಮಗಳು ಕೇಳಿದಾಗ ಅವರು, ‘ಇಷ್ಟೆಲ್ಲ ಪ್ರೀತಿ ಸಿಗುತ್ತಿರುವುದು ಸಂತಸವಾಗಿದೆ. ಸದ್ಯ ಯಾರೂ ಇಲ್ಲ. ನನ್ನ ಗಮನ ಏನಿದ್ದರೂ ಮುಂದಿನ ಗುರಿಗಳ ಬಗ್ಗೆ’ ಎಂದಿದ್ದಾರೆ ಚೋಪ್ರಾ . ಕೇಂದ್ರ ಕ್ರೀಡಾ ಇಲಾಖೆಯ ಸನ್ಮಾನ ಸಮಾರಂಭದಲ್ಲಿಯೂ ಅವರ ಭಾಷಣ ಮತ್ತು ಮುಗುಳ್ನಗೆಯ ಹಾವಭಾವಗಳು ಕೂಡ ಅವರ ಸಮಚಿತ್ತವನ್ನೇ ತೋರಿಸಿದ್ದವು. ಸೇನೆಯಲ್ಲಿ ಸುಬೇದಾರ್ ಆಗಿರುವ ನೀರಜ್ ಅವರು, ಸೇನೆಯ ಜನರಲ್ ಬಿಪಿನ್ ರಾವತ್ ಅವರ ಮನವನ್ನೂ ಗೆದ್ದಿದ್ದಾರೆ.

ADVERTISEMENT

ಕ್ರೀಡೆ ಯಾವುದೇ ಆಗಿರಲಿ. ಇಂತಹ ಸಿದ್ಧತೆ, ಬದ್ಧತೆ ಮತ್ತು ಸಮಚಿತ್ತದ ಜನರಿಗೆ ಮಾತ್ರ ಯಶಸ್ಸು ಒಲಿಯುವುದು ಹೆಚ್ಚು ಎಂಬುದಕ್ಕೆ ನೀರಜ್ ಮತ್ತೊಂದು ಉದಾಹರಣೆಯಾಗಿದ್ದಾರೆ. 2008ರಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದಾಗಿನ ದೃಶ್ಯ ನೆನಪಿಸಿಕೊಂಡರೂ ಇಂತಹದೇ ಭಾವ ಮೂಡುತ್ತದೆ. ಅಭಿನವ್‌ ಅವರ ಮಂದಹಾಸ, ಶಾಂತಚಿತ್ತದ ನಡವಳಿಕೆಗಳು ಗಮನ ಸೆಳೆಯುತ್ತವೆ. ಚೆಸ್ ಕ್ರೀಡೆಯ ದಿಗ್ಗಜ ವಿಶ್ವನಾಥನ್ ಆನಂದ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ, ವಿಶ್ವ ಟೆಸ್ಟ್‌ ಚಾಂಪಿಯನ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್, ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರೆಲ್ಲರೂ ಈ ಗುಣಗಳು ಎದ್ದು ಕಾಣುತ್ತವೆ.

ಆಟಕ್ಕಾಗಿ ಕಣಕ್ಕಿಳಿದಾಗ ಇವರಷ್ಟು ಅಗ್ರೆಸಿವ್‌ ಬೇರೆ ಯಾರೂ ಇರುವುದಿಲ್ಲ. ತಮ್ಮ ಕೃತಿಯಲ್ಲಿ ಆಕ್ರಮಣಶೀಲತೆ ತೋರುವ ಇವರು ‘ಕೂಲ್ ಕ್ಯಾಪ್ಟನ್‌’ಗಳಾಗಿ ಗಮನ ಸೆಳೆಯುತ್ತಾರೆ. ಮೈದಾನದ ಹೊರಗೆ ಇವರ ನಡವಳಿಕೆಗಳು ಸಹ್ಯವಾಗುವುದು ಇವೇ ಕಾರಣಗಳಿಂದಲೇ. ಸದ್ಯಕ್ಕೆ ನೀರಜ್ ಚೋಪ್ರಾ ಈ ದೇಶದ ಹೊಸ ಪೋಸ್ಟರ್ ಬಾಯ್ ಆಗಿರುವುದಂತೂ ಹೌದು. ಈ ಜನಪ್ರಿಯತೆ, ಸನ್ಮಾನಗಳು, ಆದರಾತಿಥ್ಯ, ಕೋಟಿ ಕೋಟಿ ಹಣದ ಹರಿವುಗಳನ್ನು ಅವರು ಹೇಗೆ ನಿರ್ವಹಿಸುತ್ತಾರೆನ್ನುವುದರ ಮೇಲೆ ಮುಂದಿನ ಭವಿಷ್ಯ ರೂಪುಗೊಳ್ಳಲಿದೆ.

ಮನೋವಿಶ್ಲೇಷಕರು ಹೇಳುವಂತೆ, ‘ನೀರಜ್ ಅವರಂತಹ ಸಾಧಕರು ಸಾಮಾನ್ಯ ಕುಟುಂಬದ ಎಲ್ಲ ಕಷ್ಟನಷ್ಟಗಳನ್ನು ಅನುಭವಿಸಿ ಈ ಹಂತಕ್ಕೆ ಬೆಳೆದಿರುತ್ತಾರೆ. ಸರಳತೆಯೆಂಬ ಸಂಸ್ಕಾರ ಅವರಿಗೆ ಇರುತ್ತದೆ. ಆದರೆ ಹಣ, ಜನಪ್ರಿಯತೆಯ ಅಮಲು ತಲೆಗೆ ಏರಬಾರದು. ಆಗ ಎರಡು ರೀತಿಯ ಅಪಾಯಗಳಿರುತ್ತವೆ. ಮೊದಲನೇಯದ್ದು ಇಷ್ಟು ಮಾಡಿದ್ದೇನೆ ಸಾಕು, ಇನ್ನು ಆರಾಮಗಿರೋಣ ಎಂಬ ಭಾವ ಮೊದಲನೆಯದ್ದು. ಇನ್ನೊಂದು ನಾನೇ ಸಾರ್ವಭೌಮ, ನನ್ನಂತೆ ಯಾರಿಲ್ಲ ಎಂಬ ಅಹಂಭಾವ ಮೂಡಬಹುದು. ಈ ಎರಡೂ ಕೂಡ ಅವರ ಬೆಳವಣಿಗೆಗಳಿಗೆ ಅಡ್ಡಿಯಾಗುತ್ತವೆ. ಆದರೆ ಒಂದೊಮ್ಮೆ ತಾನು ಸಾಧಿಸುವುದು ಇನ್ನೂ ಬಹಳಷ್ಟಿದೆ. ಕ್ರೀಡೆಯೇ ನನ್ನ ಬದುಕು, ಹಣ, ಅಧಿಕಾರ, ಜನಪ್ರಿಯತೆ ಶಾಶ್ವತವಲ್ಲ ಎಂಬ ವಾಸ್ತವದಲ್ಲಿ ಬದುಕಿದಾಗ ಮಾತ್ರ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ.

23ರ ವಯಸ್ಸಿನಲ್ಲಿ ಅಷ್ಟೈಶ್ವರ್ಯಗಳು ಒಲಿದು ಬಂದಾಗ ಅದನ್ನು ನಿರ್ವಹಣೆ ಮಾಡುವ ಪ್ರಬುದ್ಧತೆ ಇರುವುದಿಲ್ಲ. ಅದು ದಾರಿ ತಪ್ಪಿಸುವ ಸಾಧ್ಯತೆಗಳೇ ಹೆಚ್ಚು. ಆದರೆ ಈಗ ವೃತ್ತಿಪರ ಮಾರ್ಗದರ್ಶನ ಪರಿಣತರು ಇರುವುದರಿಂದ ನವಯುಗದ ಆಟಗಾರರಿಗೆ ಈ ನಿರ್ವಹಣೆ ಸುಲಭವಾಗಬಹುದು. ಒಂದಂತೂ ನಿಜ. ಇಷ್ಟು ವರ್ಷ ಎದುರಿಸಿದ ಸಮಸ್ಯೆಗಳು ಮತ್ತು ಮಾಡಿದ ಸಾಧನೆಯದ್ದು ಒಂದು ಅಧ್ಯಾಯ ಮುಗಿದಂತಾಯಿತು.

ಇಲ್ಲಿಂದ ಮುಂದೆ ಇರುವುದು ಅದಕ್ಕಿಂತಲೂ ಕಠಿಣ ಸವಾಲು. ಏಕೆಂದರೆ, ಜಗದ ಕಣ್ಣು ಈಗ ನೀರಜ್ ಮೇಲೆ ಇರುತ್ತದೆ. ಚಿನ್ನಕ್ಕಿಂತ ಕಡಿಮೆ ಸಾಧನೆಯನ್ನು ಅವರಿಂದ ಅಭಿಮಾನಿಗಳು ನಿರೀಕ್ಷೆ ಮಾಡುವುದಿಲ್ಲ. ಕ್ರೀಡೆಯಲ್ಲಿ ನಿರಂತರವಾಗಿ ಚಿನ್ನದ ಪದಕಗಳನ್ನು ಗೆಲ್ಲವುದು ಕಷ್ಟ. ತಾವು ಅನುಭವಿಸುವ ಒಂದೇ ಒಂದು ಸೋಲಿಗೂ ಬಹಳಷ್ಟು ಟೀಕೆಗಳನ್ನೂ ಎದುರಿಸಬೇಕಾಗಬಹುದು. ಇದಲ್ಲದೇ ಭಾರತದ ವ್ಯವಸ್ಥೆಯಲ್ಲಿ ರಾಜಕೀಯ, ಧಾರ್ಮಿಕ, ಜಾತಿ, ಭಾಷೆಗಳ ವಿಷಯಗಳಿಗೂ ಇವರನ್ನು ಥಳಕು ಹಾಕಬಹುದು. ವಿವಾದಗಳು ಸೃಷ್ಟಿಯಾಗಬಹುದು. ಈಗಾಗಲೇ ಅವರ ಹಳೆಯ ಟ್ವೀಟ್‌ಗಳನ್ನು ಟ್ರೋಲ್ ಮಾಡುತ್ತಿರುವ ಕೆಲಸವೂ ಜೋರಾಗಿ ನಡೆಯುತ್ತಿದೆ. ಅವರನ್ನು ಒಂದು ಪಕ್ಷದ ಪರವಾಗಿದ್ದಾರೆಂದು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಈ ಎಲ್ಲ ಟೀಕೆಗಳು, ವ್ಯಂಗ್ಯಗಳನ್ನು ಎದುರಿಸುವ ದೃಢಮನೋಭಾವವನ್ನೂ ಅವರೂ ಬೆಳೆಸಿಕೊಳ್ಳುವ ಸವಾಲು ಇದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಿಂಧು ನಂತರ ತಾವು ಭಾಗವಹಿಸಿದ ಪ್ರತಿ ಸ್ಪರ್ಧೆಗಳಲ್ಲಿಯೂ ಇಂತಹ ಸವಾಲುಗಳನ್ನು ಎದುರಿಸಿದ್ದಾರೆ. ಆದರೂ 2019ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ಜಯಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ನೆಚ್ಚಿನ ಆಟಗಾರ್ತಿಯೂ ಆಗಿದ್ದರು. ಆದರೆ ಸೆಮಿಫೈನಲ್‌ ಹಂತದಲ್ಲಿ ಎಲ್ಲ ಒತ್ತಡಗಳೂ ಮೇಲುಗೈ ಸಾಧಿಸಿ ಅವರು ಕಂಚಿನ ಪದಕಕ್ಕೆ ತೃಪ್ತಿಪಡುವಂತೆ ಆಯಿತು. ಆದರೂ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿದ ಅವರ ಸಾಧನೆ ಅಚ್ಚಳಿಯದೇ ಉಳಿಯುವಂತದ್ದು. ಈಜುಗಾರ ಮೈಕೆಲ್ ಪೆಲ್ಪ್ಸ್‌, ಅಥ್ಲೀಟ್ ಉಸೇನ್ ಬೋಲ್ಟ್‌ ಮತ್ತು ಜಿಮ್ನಾಸ್ಟ್ ಸಿಮೊನ್ ಬೈಲ್ಸ್‌ ಅವರು ನಿರಂತರವಾಗಿ ಪದಕಬೇಟೆ ಆಡಿದ್ದಾರೆ. ಆದರೆ ಅವರೂ ಇಂತಹ ಸವಾಲುಗಳನ್ನು ಎದುರಿಸಿ ಬೆಳೆದಿದ್ದಾರೆ.

ಇದೀಗ ನೀರಜ್ ಅವರಿಗೂ ಇವರೆಲ್ಲರ ಸಾಲಿನಲ್ಲಿ ನಿಲ್ಲುವ ಸಾಧನೆಯತ್ತ ಚಿತ್ತ ನೆಡುವ ಸವಾಲಿದೆ. ತಾವು ಚಿನ್ನದ ಪದಕವಿಜೇತ ಮಾತ್ರವಲ್ಲ. ಪುಟಕಿಟ್ಟ ಬಂಗಾರ ಎಂಬುದನ್ನು ತೋರಿಸಿಕೊಡುವ ಸವಾಲಿನ ಹಾದಿ ಈಗ ಆರಂಭವಾಗಿದೆ. ತಮ್ಮ ಸಿದ್ಧತೆ, ಬದ್ಧತೆ ಮತ್ತು ಸಮಚಿತ್ತಗಳನ್ನು ಉಳಿಸಿಕೊಂಡರೆ ಇದು ಅಸಾಧ್ಯವೇನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.