ADVERTISEMENT

Paris Olympics: ಹಾಕಿ: ಭಾರತಕ್ಕೆ ಬೆಲ್ಜಿಯಂ ‘ಪರೀಕ್ಷೆ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 16:17 IST
Last Updated 31 ಜುಲೈ 2024, 16:17 IST
<div class="paragraphs"><p>ಭಾರತ ಹಾಕಿ ತಂಡ&nbsp; </p></div>

ಭಾರತ ಹಾಕಿ ತಂಡ 

   

 –ಪಿಟಿಐ ಚಿತ್ರ

ಪ್ಯಾರಿಸ್: ಈಗಾಗಲೇ ಕ್ವಾರ್ಟರ್‌ಫೈನಲ್ ಪ್ರವೇಶದ ಹಾದಿಯನ್ನು ಸುಗಮಗೊಳಿಸಿಕೊಂಡಿರುವ ಭಾರತ ಹಾಕಿ ತಂಡವು ಗುರುವಾರ ಬಲಿಷ್ಠ ಬೆಲ್ಜಿಯಂ  ತಂಡವನ್ನು ಎದುರಿಸಲಿದೆ.  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆಯಲಿರುವ ಬಿ ಗುಂಪಿನ ಈ ಪಂದ್ಯವು ಹರ್ಮನ್‌ಪ್ರೀತ್ ಸಿಂಗ್ ಬಳಗದ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಾಧ್ಯತೆ ಇದೆ.

ADVERTISEMENT

ಎರಡು ಗುಂಪುಗಳಿಂದ ತಲಾ ನಾಲ್ಕು ತಂಡಗಳು ಎಂಟರ ಘಟ್ಟಕ್ಕೆ ಪ್ರವೇಶಿಸಲಿವೆ. ಬಿ ಗುಂಪಿನಲ್ಲಿ ಏಳು ಅಂಕಗಳನ್ನು ಗಳಿಸಿರುವ  ಭಾರತ ತಂಡವು ಎರಡನೇ ಸ್ಥಾನದಲ್ಲಿದೆ.  ಈಗ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿದೆ. ಒಂದು ಪಂದ್ಯ ಡ್ರಾ ಆಗಿದೆ.  ಬೆಲ್ಜಿಯಂ ತಂಡವು ಆಡಿದ ಎಲ್ಲ ಮೂರು ಪಂದ್ಯಗಳಲ್ಲಿಯೂ ಗೆದ್ದು ಅಗ್ರಸ್ಥಾನದಲ್ಲಿದೆ. 

ಆಸ್ಟ್ರೇಲಿಯಾ ತಂಡವು ಎರಡು ಪಂದ್ಯ ಗೆದ್ದು, ಒಂದರಲ್ಲಿ ಸೋತಿದೆ. ಮೂರನೇ ಸ್ಥಾನದಲ್ಲಿದೆ. ಅರ್ಜೆಂಟೀನಾ ತಂಡವು ಒಂದು  ಗೆಲುವು, ಸೋಲು ಮತ್ತು ಡ್ರಾ ದೊಂದಿಗೆ ನಾಲ್ಕು ಅಂಕ ಗಳಿಸಿದೆ. ಈ ತಂಡವೂ ಕ್ವಾರ್ಟರ್‌ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಆದರೆ  ಇನ್ನುಳಿದ ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ತಂಡಗಳು ಎಂಟರ ಘಟ್ಟದ ಹಾದಿಯಿಂದ ಹೊರಬಿದ್ದಿವೆ. 

ಭಾರತ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3–2ರಿಂದ ಪ್ರಯಾಸದ ಜಯ ಗಳಿಸಿತ್ತು.  ಎರಡನೇಯದ್ದರಲ್ಲಿ ಅರ್ಜೆಂಟೀನಾ ಎದುರಿನ ಪಂದ್ಯ ಡ್ರಾ ಆಗಿತ್ತು. ಎರಡೂ ಪಂದ್ಯಗಳಲ್ಲಿ ಕೊನೆಯ ನಿಮಿಷದಲ್ಲಿ ಗೋಲು ಗಳಿಸಿದ್ದರಿಂದ ಭಾರತ ತಂಡದ ಸೋಲುಗಳು ತಪ್ಪಿದ್ದವು. ನಾಯಕ ಹರ್ಮನ್‌ಪ್ರೀತ್ ಅವರ ಚಾಕಚಕ್ಯತೆ ಆಟದಿಂದಾಗಿ ತಂಡವು ಇದುವರೆಗೆ ಉತ್ತಮ ಸ್ಥಿತಿಯಲ್ಲಿದೆ. 

ಅನುಭವಿ ಮನ್‌ಪ್ರೀತ್‌ ಸಿಂಗ್ ಮತ್ತು ಉಪನಾಯಕ ಹಾರ್ದಿಕ್ ಸಿಂಗ್ ಅವರು ಇರುವ ಮಿಡ್‌ಫೀಲ್ಡ್ ವಿಭಾಗವು ತಮ್ಮ ಲಯದಲ್ಲಿ ಮುಂದುವರಿದರೆ ಪಂದ್ಯದ ಗೆಲುವು ಸುಲಭವಾಗಲಿದೆ. ಮನದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ಎದುರಾಳಿ ತಂಡದ ರಕ್ಷಣಾ ಪಡೆಯ ಮೇಲೆ ನಿರಂತರ ಒತ್ತಡ ಹೇರುವ ಸವಾಲು ಇದೆ. 

ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಚುಟುಕು ಪಾಸ್‌ ಕೊಡುತ್ತ, ಒನ್‌ ಟು ಒನ್ ತಂತ್ರ ಅನುಸರಿಸಿದ್ದು ಭಾರತ ತಂಡಕ್ಕೆ ಫಲ ನೀಡಿತು. ರೈಟ್‌ ಬ್ಯಾಕ್ ಜರ್ಮನ್‌ಪ್ರೀತ್ ಸಿಂಗ್ ಅವರು  ಎಲ್ಲ ವಿಭಾಗಗಳಲ್ಲಿಯೂ ಚುರುಕಾಗಿ ಓಡಾಡುತ್ತ ಗೋಲು ಹೊಡೆಯುವ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಅವರಂತೆಯೇ  ಅಮಿತ್ ರೋಹಿದಾಸ್ ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಅವರು ಪೆನಾಲ್ಟಿ ಕಾರ್ನರ್‌ಗಳಿಗೆ ಎದೆಗೊಟ್ಟು ರಕ್ಷಿಸಿದ್ದು ಶ್ಲಾಘನಾರ್ಹ. ತಮ್ಮ ವೃತ್ತಿಜೀವನದ ಕೊನೆಯ ಒಲಿಂಪಿಕ್ಸ್ ಆಡುತ್ತಿರುವ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರ ಚುರುಕಾದ ಆಟವು ತಂಡವನ್ನು ಸೋಲಿನಿಂದ ತಪ್ಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.