ADVERTISEMENT

ವಿನೀಸಿಯಸ್‌ ಮತ್ತೆ ಜನಾಂಗೀಯ ನಿಂದನೆಗೆ ಗುರಿ

​ಪ್ರಜಾವಾಣಿ ವಾರ್ತೆ
Published 22 ಮೇ 2023, 23:27 IST
Last Updated 22 ಮೇ 2023, 23:27 IST
ತನ್ನನ್ನು ನಿಂದಿಸಿದ ಪ್ರೇಕ್ಷಕನತ್ತ ಕೈತೋರಿಸಿ ವಾಗ್ವಾದ ನಡೆಸಿದ ವಿನೀಸಿಯಸ್‌  –ಎಎಫ್‌ಪಿ ಚಿತ್ರ
ತನ್ನನ್ನು ನಿಂದಿಸಿದ ಪ್ರೇಕ್ಷಕನತ್ತ ಕೈತೋರಿಸಿ ವಾಗ್ವಾದ ನಡೆಸಿದ ವಿನೀಸಿಯಸ್‌  –ಎಎಫ್‌ಪಿ ಚಿತ್ರ   

ಮ್ಯಾಡ್ರಿಡ್‌: ರಿಯಲ್‌ ಮ್ಯಾಡ್ರಿಡ್‌ ಫುಟ್‌ಬಾಲ್‌ ತಂಡದ ಬ್ರೆಜಿಲ್‌ನ ಆಟಗಾರ ವಿನೀಸಿಯಸ್‌ ಜೂನಿಯರ್‌ ಅವರು ಮತ್ತೆ ಜನಾಂಗೀಯ ನಿಂದನೆಗೆ ಗುರಿಯಾದ ಆರೋಪ ಕೇಳಿಬಂದಿದೆ.

ಭಾನುವಾರ ನಡೆದ ವಲೆನ್ಸಿಯಾ ವಿರುದ್ಧದ ಲಾ ಲಿಗಾ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪಂದ್ಯದಲ್ಲಿ ವಲೆನ್ಸಿಯಾ 1–0 ರಲ್ಲಿ ರಿಯಲ್‌ ಮ್ಯಾಡ್ರಿಡ್‌ ತಂಡವನ್ನು ಮಣಿಸಿತ್ತು.

ಪಂದ್ಯದ 70ನೇ ನಿಮಿಷದಲ್ಲಿ ಪ್ರೇಕ್ಷಕರಲ್ಲೊಬ್ಬ ವಿನೀಸಿಯಸ್‌ ಅವರನ್ನು ಗುರಿಯಾಗಿಸಿ ಜಂನಾಗೀಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಕೆರಳಿದ ವಿನೀಸಿಯಸ್‌, ಪ್ರೇಕ್ಷಕರ ಗ್ಯಾಲರಿ ಸಮೀಪ ತೆರಳಿ ಆತನ ಜತೆ ವಾಗ್ವಾದ ಮಾಡಿದರು. ಎರಡೂ ತಂಡಗಳ ಆಟಗಾರರು ಅವರನ್ನು ಸಮಾಧಾನಪಡಿಸಿದರು. ಇದರಿಂದ ಏಳು ನಿಮಿಷಗಳ ಕಾಲ ಆಟ ಸ್ಥಗಿತಗೊಂಡಿತ್ತು.

ADVERTISEMENT

ಆಟ ಶುರುವಾದ ಕೆಲವು ನಿಮಿಷಗಳಲ್ಲಿ ವಿನೀಸಿಯಸ್‌ ಅವರು ವಲೆನ್ಸಿಯಾ ಆಟಗಾರರು ಮತ್ತು ಕೋಚಿಂಗ್‌ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಎದುರಾಳಿ ತಂಡದ ಆಟಗಾರರನ್ನು ದೂಡಿದ್ದಕ್ಕೆ ರೆಫರಿ, ವಿನೀಸಿಯಸ್‌ ಅವರನ್ನು ಹೊರಕ್ಕೆ ಕಳುಹಿಸಿದರು. ಇದರಿಂದ ಮೈದಾನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.

‘ಇಂತಹ ಘಟನೆ ಇದೇ ಮೊದಲಲ್ಲ. ಪದೇ ಪದೇ ನಡೆಯುತ್ತಿದೆ. ಲಾ ಲಿಗಾದಲ್ಲಿ ಜನಾಂಗೀಯತೆ ಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ರೊನಾಲ್ಡಿನೊ, ರೊನಾಲ್ಡೊ, ಕ್ರಿಸ್ಟಿಯಾನೊ (ರೊನಾಲ್ಡೊ) ಮತ್ತು ಮೆಸ್ಸಿ ಅವರಿಗೆ ಸೇರಿದ್ದ ಲೀಗ್‌ (ಲಾ ಲಿಗಾ) ಈಗ ಜನಾಂಗೀಯವಾದಿಗಳಿಗೆ ಸೇರಿದೆ. ಆದರೆ ಅವರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ’ ಎಂದು 22 ವರ್ಷದ ವಿನೀಸಿಯಸ್‌ ‘ಟ್ವೀಟ್‌’ ಮಾಡಿದ್ದಾರೆ.

ಫ್ರಾನ್ಸ್‌ನ ಸ್ಟಾರ್‌ ಆಟಗಾರ ಕಿಲಿಯಾನ್‌ ಎಂಬಾಪೆ,  ಬ್ರೆಜಿಲ್‌ ಅಧ್ಯಕ್ಷ ಲುಯಿಸ್‌ ಇನಾಸಿಯೊ ಲುಲ ಡ ಸಿಲ್ವ ಸೇರಿದಂತೆ ಹಲವರು ವಿನೀಸಿಯಸ್‌ ಬೆಂಬಲಕ್ಕೆ ನಿಂತಿದ್ದಾರೆ. ‘ನೀನು ಒಬ್ಬಂಟಿಯಲ್ಲ. ನಾವು ನಿನ್ನ ಜೊತೆಗಿದ್ದೇವೆ’ ಎಂದು ಎಂಬಾಪೆ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ತನಿಖೆ ಆರಂಭ: ಜನಾಂಗೀಯ ನಿಂದನೆ ಘಟನೆ ಬಗ್ಗೆ ರಿಯಲ್‌ ಮ್ಯಾಡ್ರಿಡ್‌ ತಂಡದ ವ್ಯವಸ್ಥಾಪನಾ ಮಂಡಳಿಯು ವಲೆನ್ಸಿಯಾದ ಅಟಾರ್ನಿ ಜನರಲ್‌ ಕಚೇರಿಯಲ್ಲಿ ದೂರು ನೀಡಿದ್ದು, ಸ್ಪೇನ್‌ನ ಪ್ರಾಸಿಕ್ಯೂಟರ್‌ಗಳು ಸೋಮವಾರ ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.