ADVERTISEMENT

ವರ್ಣಭೇದ ವಿರುದ್ಧ ಹ್ಯಾಮಿಲ್ಟನ್‌ ದಿಟ್ಟ ನಡೆ

ಬಸವರಾಜ ದಳವಾಯಿ
Published 16 ಸೆಪ್ಟೆಂಬರ್ 2020, 19:30 IST
Last Updated 16 ಸೆಪ್ಟೆಂಬರ್ 2020, 19:30 IST
 ಲೂಯಿಸ್‌ ಹ್ಯಾಮಿಲ್ಟನ್‌
 ಲೂಯಿಸ್‌ ಹ್ಯಾಮಿಲ್ಟನ್‌   

‘ನಾನು ವಿರಮಿಸುವುದಿಲ್ಲ; ಬಿಟ್ಟುಕೊಡುವುದೂ ಇಲ್ಲ. ನನಗೆ ಸರಿ ಎಂದು ಅನಿಸಿದ್ದನ್ನು ದಿಟ್ಟವಾಗಿ ಹೇಳಲು ಸಿಗುವ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ...‌’

ಆರು ಬಾರಿಯ ಫಾರ್ಮುಲಾ ಒನ್‌ ವಿಶ್ವ ಚಾಂಪಿಯನ್‌, ಬ್ರಿಟನ್‌‌ನ ಲೂಯಿಸ್‌ ಹ್ಯಾಮಿಲ್ಟನ್‌ ವರ್ಣಭೇದ ನೀತಿ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ ಹಾಕಿದ ಇನ್‌ಸ್ಟಾಗ್ರಾಮ್‌ ಪೋಸ್ಟ್ ಇದು.

ಇಟಲಿಯಲ್ಲಿಭಾನುವಾರ ನಡೆದ ಟಸ್ಕನ್‌ ಗ್ರ್ಯಾನ್ ಪ್ರೀಯಲ್ಲಿ ಹ್ಯಾಮಿಲ್ಟನ್ ಅವರಿಗೆ ಪ್ರಶಸ್ತಿ ಒಲಿದಿತ್ತು. ಇದು ಅವರ ವೃತ್ತಿಬದುಕಿನ 90ನೇ ರೇಸ್‌ ವಿಜಯವಾಗಿತ್ತು. ಆದರೆ ಅಲ್ಲಿ ಅದಕ್ಕಿಂತ ಹೆಚ್ಚು ಗಮನ ಸೆಳೆದದ್ದು ಟ್ರೋಫಿಯನ್ನು ಸ್ವೀಕರಿಸುವ ವೇಳೆ ಅವರು ಧರಿಸಿದ್ದ ಟಿ–ಶರ್ಟ್‌. ‘ಬ್ರಿಯೊನ್ನಾ ಟೇಲರ್‌ ಅವರ ಹತ್ಯೆಗೈದ ಪೊಲೀಸರನ್ನು ಬಂಧಿಸಿ’ ಎಂದು ಟಿ–ಶರ್ಟ್‌ನ ಮುಂಭಾಗದಲ್ಲಿ ಬರೆದಿದ್ದರೆ, ಶರ್ಟ್‌ನ ಹಿಂಭಾಗದಲ್ಲಿ ಬ್ರಿಯೊನ್ನಾರ ಭಾವಚಿತ್ರವಿತ್ತು. ‘ಅವಳ ಹೆಸರನ್ನು ಹೇಳಿ (ಸೇ ಹರ್‌ ನೇಮ್‌)’ ಎಂಬ ಒಕ್ಕಣೆಯೂ ಇತ್ತು.

ADVERTISEMENT

ಈ ಘಟನೆಯನ್ನು ತನಿಖೆಗೆ ಪರಿಗಣಿಸುವುದಾಗಿಮೋಟರ್‌ ರೇಸ್‌ನ ವಿಶ್ವ ಆಡಳಿತ ಮಂಡಳಿ ಎಫ್‌ಐಎ ಈ ಮೊದಲು ಹೇಳಿತ್ತು. ಆದರೆ, ರೇಸ್‌ನ ಮೊದಲು ಹಾಗೂ ನಂತರ ಚಾಲಕರು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಮುಂದಿನ ರೇಸ್‌ ವೇಳೆ ಸ್ಪ‍ಷ್ಟಪಡಿಸುವುದಾಗಿ ತಿಳಿಸಿದೆ.

ಯಾರು ಈ ಬ್ರಿಯೊನ್ನಾ: ಅಮೆರಿಕದ ಲೂಯಿಸ್‌ ವಿಲ್ಲೆ ಕೆಂಟುಕಿಯಲ್ಲಿ ಮಾರ್ಚ್‌ನಲ್ಲಿ ನಡೆದ ಪೊಲೀಸರ ಗುಂಡಿನ ದಾಳಿಯಲ್ಲಿ ಕಪ್ಪು ಜನಾಂಗದ ನರ್ಸ್‌ ಬ್ರಿಯೊನ್ನಾ ಟೇಲರ್ ಅಸುನೀಗಿದ್ದರು. ಬ್ರಿಯೊನ್ನಾ ಅವರ ಮಾಜಿ ಗೆಳೆಯ ಡ್ರಗ್ಸ್ ಪ್ರಕರಣದಲ್ಲಿ‌ ಆರೋಪಿಯಾಗಿದ್ದು, ಆತನು ಆಕೆಯ ಮನೆಯಲ್ಲಿ ಅಡಗಿದ್ದಾನೆಂದು ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅಲ್ಲಿದ್ದ ಬ್ರಿಯೊನ್ನಾ ಅವರ ಗೆಳೆಯ ಕೆನೆತ್‌ ವಾಕರ್‌ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಬ್ರಿಯೊನ್ನಾ ಮೃತಪಟ್ಟಿದ್ದರು.

‘ನಾವೆಲ್ಲರೂ ವರ್ಣಭೇದ ನೀತಿ ವಿರುದ್ಧ ಮಾತ್ರವಲ್ಲದೆ ಎಲ್ಲ ರೀತಿಯ ಅನ್ಯಾಯಗಳ ವಿರುದ್ಧ ಸಿಡಿದೇಳಬೇಕಿದೆ. ಭವಿಷ್ಯದ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸಿಕೊಡೋಣ’ಎಂದುಕಪ್ಪು ಜನಾಂಗದ ಮೊದಲ ರೇಸ್ ಡ್ರೈವರ್ ಎಂಬ ಶ್ರೇಯ ಹೊಂದಿರುವ ಹ್ಯಾಮಿಲ್ಟನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಕೊನೆಗೊಂಡ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಜಪಾನ್‌ನ ನವೊಮಿ ಒಸಾಕ ಅವರೂ ‘ವಿಶ್ವದ ದೊಡ್ಡಣ್ಣ’ನ ಕಾಲಬುಡದಲ್ಲಿ ನಡೆದ ಸಣ್ಣತನದ ಘಟನೆಗಳ ವಿರುದ್ಧ ‘ಮಾಸ್ಕ್’ ಅಭಿಯಾನದ ಮೂಲಕ ಪ್ರತಿಭಟಿಸಿದ್ದರು. ಪೊಲೀಸ್‌ ಹಿಂಸೆ ಮತ್ತು ವರ್ಣಭೇದದ ಹಿನ್ನೆಲೆಯಲ್ಲಿ ಹತ್ಯೆಯಾದವರ ಹೆಸರುಗಳುಳ್ಳ ಮಾಸ್ಕ್‌ಗಳನ್ನು, ಟೂರ್ನಿಯಲ್ಲಿ ಆಡಿದ ಪ್ರತಿ ಪಂದ್ಯದಲ್ಲೂ ಧರಿಸಿ ಗಮನಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.