ADVERTISEMENT

ಬ್ಯಾಡ್ಮಿಂಟನ್‌ ಟೂರ್ನಿ ಕ್ವಾರ್ಟರ್‌ ಫೈನಲ್‌ಗೆ ಪ್ರಿಯಾನ್ಶು, ಟ್ರೀಸಾ–ಗಾಯತ್ರಿ

ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 5 ಜುಲೈ 2024, 14:25 IST
Last Updated 5 ಜುಲೈ 2024, 14:25 IST
ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್‌ (ಎಎಫ್‌ಪಿ  ಸಾಂದರ್ಭಿಕ ಚಿತ್ರ)
ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್‌ (ಎಎಫ್‌ಪಿ  ಸಾಂದರ್ಭಿಕ ಚಿತ್ರ)   

ಕ್ಯಾಲ್ಗರಿ (ಕೆನಡಾ): ಭಾರತದ ಉದಯೋನ್ಮುಖ ಆಟಗಾರ ಪ್ರಿಯಾನ್ಶು ರಾಜಾವತ್‌ ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅಮೋಘ ಆಟದ ಪ್ರರ್ಶನ ಮುಂದುವರಿಸಿದ್ದಾರೆ. ಜಪಾನ್‌ನ ಟಕುಮಾ ಒಬಯಾಶಿ ವಿರುದ್ಧ ಗೆಲುವು ಸಾಧಿಸಿ  ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

ಗುರುವಾರ ತಡರಾತ್ರಿ ನಡೆದ 38 ನಿಮಿಷದ ಪಂದ್ಯದಲ್ಲಿ ವಿಶ್ವ ಕ್ರಮಾಂಕದ 39ನೇ ಸ್ಥಾನದಲ್ಲಿರುವ ರಾಜಾವತ್‌, 21-19 21-11ರಿಂದ 33ನೇ ಕ್ರಮಾಂಕದ ಒಬಯಾಶಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆ್ಯಂಡೆರ್ಸ್‌ ಆಂಟೋನ್ಸನ್‌ ಅವರನ್ನು ಎದುರಿಸಲಿದ್ದಾರೆ.   

ಮಹಿಳಾ ಡಬಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ಕೂಡಾ ಕ್ವಾರ್ಟರ್‌ ಫೈನಲ್‌ ತಲುಪಿದೆ.

ADVERTISEMENT

ಮೊದಲ ಗೇಮ್‌ ಕಳೆದುಕೊಂಡ ಟ್ರೀಸಾ–ಗಾಯತ್ರಿ ಜೋಡಿ ಮರುಹೋರಾಟದ ಮೂಲಕ 17-21 21-7 21-8 ರಿಂದ ಡೆನ್ಮಾರ್ಕ್‌ನ ನಟಾಸ್ಜಾ ಅಥೋಂನಿಸೇನ್‌ ಮತ್ತು ನೆದರ್ಲೆಂಡ್ಸ್‌ನ ಅಲಿಸ್ಸಾ ಟಿರ್ಟೊಸೆಂಟೊನೊ ಜೋಡಿಯನ್ನು ಸೋಲಿಸಿತು.

ಭಾರತದ ಜೋಡಿಯು ಕ್ವಾರ್ಟರ್‌ ಫೈನಲ್‌ನಲ್ಲಿ ಚೈನಾ ತೈಪೆಯ ಪೀ ಶಾನ್ ಹ್ಸೀ ಮತ್ತು ಎನ್ ತ್ಸು ಹಂಗ್ ಜೋಡಿಯನ್ನು ಎದುರಿಸಲಿದೆ.

ಭಾರತದ ಇತರ ಸ್ಪರ್ಧಿಗಳು ಎರಡನೇ ಸುತ್ತಿನಲ್ಲೇ ಹೊರಬಿದ್ದರು. ಅನುಪಮಾ ಉಪಾಧ್ಯ ಹಾಗೂ ತಾನ್ಯಾ ಹೇಮಂತ್‌ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿನ ಸೋಲನುಭವಿಸಿದ್ದಾರೆ. 

ಪ್ರಬಲ ಹೋರಾಟ ನಡೆಸಿದ ಹೊರತಾಗಿಯೂ ಅನುಪಮಾ, 14-21 21-17 13-21ರಿಂದ ಕೆನಡಾದ ಮಿಚೆಲ್ಲೆ ಲೀ ಅವರಿಗೆ ಶರಣಾದರು. ತಾನ್ಯಾ 11-21 13-21ರಿಂದ ಮೂರನೇ ಶ್ರೇಯಾಂಕದ ಬುಸಾನನ್‌ ಒಂಗ್ಬಾಮ್‌ರುಂಗ್ಫಾನ್‌ (ಥಾಯ್ಲೆಂಡ್‌) ವಿರುದ್ಧ ಪರಾಭವಗೊಂಡರು.

ಭಾರತದ ಕೃಷ್ಣಪ್ರಸಾದ್‌ ಗರಗ ಮತ್ತು ಸಾಯಿ ಪ್ರತೀಕ್‌ ಜೋಡಿ ಪುರುಷರ ಡಬಲ್ಸ್‌ನಲ್ಲಿ 21-19 18-21 17-21ರಿಂದ ಚೈನಾ ತೈಪೆಯ ಬಿಂಗ್-ವೀ ಲಿನ್ ಮತ್ತು ಚಿಂಗ್ ಹೆಂಗ್ ಸು ಜೋಡಿಗೆ ಶರಣಾಯಿತು.

ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಕಪೂರ್‌ ಮತ್ತು ರುತ್ವಿಕಾ ಶಿವಾನಿ ಗಡ್ಡೆ ಜೋಡಿಯು 15-21 21-19 9-21ರಿಂದ ಚೈನಾ ತೈಪೆಯ ಚೆಂಗ್ ಕುವಾನ್ ಚೆನ್ ಮತ್ತು ಯಿನ್-ಹುಯಿ ಹ್ಸು ಜೋಡಿ ವಿರುದ್ಧ ಸೋಲನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.